ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು ಸುಮಾರು 50 ಕಿಮೀ ದೂರ ಬೈಕ್‌ನಲ್ಲೇ ಕೊಂಡೊಯ್ದಿದ್ದಾನೆ. ಸರ್ಕಾರಿ ಆಸ್ಪತ್ರೆಯವರು ವಾಹನ ವ್ಯವಸ್ಥೆ ಮಾಡಲು ನಿರಾಕರಿಸಿದ್ದರಿಂದ ಅನಿವಾರ್ಯವಾಗಿ ಆತ ಶವ ಸಂಸ್ಕಾರಕ್ಕಾಗಿ ಬೈಕ್‌ನಲ್ಲೇ ಮೃತದೇಹವನ್ನು ತೆಗೆದುಕೊಂಡು ಹೋಗಿದ್ದಾನೆ. ಶಾದೋಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಅನುಪ್ಪುರ್ ನಿವಾಸಿಯಾಗಿದ್ದ ಜೈಮಂತ್ರಿ ಯಾದವ್ ಎಂಬ ಮಹಿಳೆ ಎದೆನೋವಿನಿಂದ ಬಳಲುತ್ತಿದ್ದು, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಅಲ್ಲಿ ಹೆಚ್ಚಿನ ವ್ಯವಸ್ಥೆ ಇಲ್ಲದ ಕಾರಣ ಶಾಧೋಲ್‌ನ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ.
ಆಕೆಯ ಶವವನ್ನು ಸಂಸ್ಕಾರಕ್ಕಾಗಿ ಕೊಂಡೊಯ್ಯಲು ಆಸ್ಪತ್ರೆಯವರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿಲ್ಲ. ತಮ್ಮ ಬಳಿ ವಾಹನವೇ ಇಲ್ಲವೆಂದು ಹೇಳಿದ್ದಾರೆ. ಖಾಸಗಿ ಆಂಬ್ಯುಲೆನ್ಸ್ ದುಬಾರಿಯಾಗಿದ್ದರಿಂದ ಅಷ್ಟು ಹಣ ಮಗನ ಬಳಿ ಇರಲಿಲ್ಲ.
ಆತ ತಾಯಿಯ ಶವವನ್ನು ಬೆಡ್ ಶೀಟ್‌ನಲ್ಲಿ ಸುತ್ತಿ ಬೈಕ್‌ಗೆ ಕಟ್ಟಿಕೊಂಡು ಸಂಸ್ಕಾರಕ್ಕಾಗಿ ಕೊಂಡೊಯ್ದಿದ್ದಾನೆ. ಸುಮಾರು 50 ಕಿ.ಮೀ. ದೂರ ತಾಯಿಯ ಮೃತದೇಹವನ್ನು ಬೈಕ್‌ನಲ್ಲೇ ತೆಗೆದುಕೊಂಡು ಹೋಗಿದ್ದಾನೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ. ಕೆಲ ದಿನಗಳ ಹಿಂದಷ್ಟೆ 8 ವರ್ಷದ ಬಾಲಕನೊಬ್ಬ ತನ್ನ 2 ವರ್ಷದ ಪುಟ್ಟ ಸಹೋದರನ ಶವ ಕೊಂಡೊಯ್ಯಲು ಆಂಬ್ಯುಲೆನ್ಸ್ ಇಲ್ಲದೇ ಪರದಾಡಿದ್ದ ಘಟನೆ ಸಹ ಮಧ್ಯಪ್ರದೇಶದಲ್ಲಿ ನಡೆದಿತ್ತು.