ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿರುವ ಹಿರಿಯ ನಟ ನಾಸಿರುದ್ದೀನ್ ಶಾ ತಮ್ಮ ಅದ್ಭುತ ನಟನೆಗಾಗಿ ಲೆಕ್ಕವಿಲ್ಲದಷ್ಟು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿತ್ರೋದ್ಯಮಗಳಲ್ಲಿ ನೀಡಲಾಗುತ್ತಿರುವ ಪ್ರಶಸ್ತಿ, ಪುರಸ್ಕಾರಗಳ ಹಿಂದಿನ ಮಾನದಂಡಗಳನ್ನು ಪ್ರಶ್ನಿಸಿದ ನಟರ ಬಳಗ ಸೇರಿಕೊಂಡಿದ್ದಾರೆ ಶಾ. ತಮಗೆ ಸಿಕ್ಕ ಪ್ರಶಸ್ತಿಗಳನ್ನು ತಾವು ಹೇಗೆ ಬಳಸುತ್ತಿದ್ದಾರೆ ಎಂದು ಬಹಿರಂಗಗೊಳಿಸಿ ಅಚ್ಚರಿ ಮೂಡಿಸಿದ್ದಾರೆ ನಾಸಿರುದ್ದೀನ್ ಶಾ.
ಈ ಕುರಿತು ಲಲ್ಲನ್‌ಟಾಪ್ ಹೆಸರಿನ ಸುದ್ದಿ ಪೋರ್ಟಲ್‌ಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ನಾಸಿರುದ್ದೀನ್ ಶಾ, “ನನಗೆ ಈ ಟ್ರೋಫಿಗಳಲ್ಲಿ ಯಾವುದೇ ಮೌಲ್ಯ ಕಾಣುವುದಿಲ್ಲ. ಮೊದಲಿಗೆ ಈ ಪ್ರಶಸ್ತಿಗಳನ್ನು ಸ್ವೀಕರಿಸಿದ ವೇಳೆ ಭಾರೀ ಖುಷಿಯಲ್ಲಿದ್ದೆ. ಆದರೆ ಇವುಗಳು ನನ್ನ ಸುತ್ತಲೂ ಗುಡ್ಡೆಯಾಗುವುದಕ್ಕೆ ಆರಂಭಿಸಿದವು. ಬರುಬರುತ್ತಾ ಈ ಪ್ರಶಸ್ತಿಗಳನ್ನು ಅರ್ಹತೆಗಿಂತ ಲಾಬಿ ಮಾಡುವ ಮೂಲಕ ಪಡೆಯಲಾಗುತ್ತಿದೆ ಎಂದು ಅರಿತುಕೊಂಡೆ. ಹೀಗಾಗಿ ನಾನು ಪ್ರಶಸ್ತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟುಬಿಟ್ಟೆ,” ಎಂದು ತಿಳಿಸಿದ್ದಾರೆ.
“ಯಾವುದೇ ಪಾತ್ರಕ್ಕೆ ತನ್ನ ಜಿವವನ್ನೇ ತುಂಬುವವನೇ ನಿಜವಾದ ಒಳ್ಳೆಯ ನಟ. ಸುಮ್ಮನೇ ಯಾರೋ ಒಬ್ಬ ನಟನನ್ನು ಗುಂಪಿನಿಂದ ಆರಿಸಿ, ಈತನೇ ವರ್ಷದ ಅತ್ಯುತ್ತಮ ನಟ ಎಂದರೆ ಅದು ನ್ಯಾಯವೇ? ನನಗೆ ಈ ಪ್ರಶಸ್ತಿಗಳ ಬಗ್ಗೆ ಹೆಮ್ಮೆಯಿಲ್ಲ. ನನಗೆ ಸಿಕ್ಕ ಕೊನೆಯ ಎರಡು ಪ್ರಶಸ್ತಿಗಳನ್ನು ನಾನು ಹೋಗಿ ಸ್ವೀಕರಿಸಿಯೂ ಇಲ್ಲ. ಫಾರ್ಮ್ ಹೌಸ್ ನಿರ್ಮಾಣ ಮಾಡಿದ ಕೂಡಲೇ ನಾನು ಈ ಫಿಲಂಫೇರ್ ಪ್ರಶಸ್ತಿಗಳನ್ನು ಅಲ್ಲಿನ ವಾಶ್‌ರೂಂನ ಹ್ಯಾಂಡಲ್‌ಗಳನ್ನಾಗಿ ಈ ಪ್ರಶಸ್ತಿಗಳನ್ನು ಪರಿವರ್ತಿಸಿದ್ದೇನೆ,” ಎಂದು ಶಾ ಹೇಳಿಕೊಂಡಿದ್ದಾರೆ.