ಪ್ಲಾಸ್ಟಿಕ್ ಎಷ್ಟು ಅಪಾಯಕಾರಿ ಅನ್ನೋದು ಎಲ್ಲರಿಗೂ ತಿಳಿದಿದೆ. ಪ್ಲಾಸ್ಟಿಕ್ ಬಳಕೆಯನ್ನು ನಿರ್ಬಂಧಿಸಲು ಸರ್ಕಾರಗಳು ಕೂಡ ಕಸರತ್ತು ಮಾಡುತ್ತಿವೆ. ಈ ಮಧ್ಯೆ ವಿಜ್ಞಾನಿಗಳನ್ನೇ ಬೆಚ್ಚಿಬೀಳಿಸುವಂತಹ ಸಂಗತಿಯೊಂದು ಬೆಳಕಿಗೆ ಬಂದಿದೆ. ಮಾನವರ ವೃಷಣಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿದೆ.
ನ್ಯೂ ಮೆಕ್ಸಿಕೋ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮಾನವರು ಮತ್ತು ನಾಯಿಗಳ ವೃಷಣ ಅಂಗಾಂಶವನ್ನು ಅಧ್ಯಯನ ಮಾಡಿದರು. ಈ ಮಾದರಿಯಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದು ದೃಢಪಟ್ಟಿದೆ. ಆದರೆ ನಾಯಿಗಳಿಗಿಂತ ಮೂರು ಪಟ್ಟು ಹೆಚ್ಚು ಮೈಕ್ರೋಪ್ಲಾಸ್ಟಿಕ್‌ಗಳು ಮಾನವರಲ್ಲಿ ಕಂಡುಬಂದಿವೆ. ಮಾನವರಲ್ಲಿ ಪ್ರತಿ ಗ್ರಾಂ ಅಂಗಾಂಶಕ್ಕೆ 329.44 ಮೈಕ್ರೋಗ್ರಾಂಗಳಷ್ಟು ಮೈಕ್ರೋಪ್ಲಾಸ್ಟಿಕ್ ಕಂಡುಬಂದರೆ, ನಾಯಿಗಳಲ್ಲಿ 122.63 ಮೈಕ್ರೋ ಗ್ರಾಂಗಳಷ್ಟು ಮೈಕ್ರೋಪ್ಲಾಸ್ಟಿಕ್ಗಳು ಕಂಡುಬಂದಿವೆ.
ಪುರುಷರ ಫಲವತ್ತತೆಯ ಮೇಲೆ ಮೈಕ್ರೊಪ್ಲಾಸ್ಟಿಕ್ ದುಷ್ಪರಿಣಾಮ!
ಪ್ಲಾಸ್ಟಿಕ್ ಮಾಲಿನ್ಯವು ಮಾನವ ದೇಹದ ಪ್ರತಿಯೊಂದು ಭಾಗಕ್ಕೂ ಹೇಗೆ ತೂರಿಕೊಂಡಿದೆ ಎಂಬುದಕ್ಕೆ ಈ ಅಧ್ಯಯನವೇ ಸಾಕ್ಷಿ. ಈ ಸೂಕ್ಷ್ಮ ತುಣುಕುಗಳು ಪುರುಷರ ಸಂತಾನೋತ್ಪತ್ತಿಯ ಮೇಲೆ ಪ್ರಭಾವ ಬೀರುವ ಬಗ್ಗೆ ಆತಂಕ ಮೂಡಿದೆ. ಮಾನವರ ವೃಷಣಗಳಲ್ಲಿ ವಿಜ್ಞಾನಿಗಳು 12 ವಿವಿಧ ರೀತಿಯ ಮೈಕ್ರೋಪ್ಲಾಸ್ಟಿಕ್‌ಗಳನ್ನು ಗುರುತಿಸಿದ್ದಾರೆ. ಅವುಗಳಲ್ಲಿ ಪಾಲಿಥಿಲೀನ್ ಎಂಬ ಮೈಕ್ರೋಪ್ಲಾಸ್ಟಿಕ್ ಗಮನಾರ್ಹ ಪ್ರಮಾಣದಲ್ಲಿ ಕಂಡುಬಂದಿದೆ.
ಪಾಲಿಥಿಲೀನ್ ಅನ್ನು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಚೀಲಗಳನ್ನು ತಯಾರಿಸಲು ಬಳಸಲಾಗುತ್ತದೆ. ವೀರ್ಯ ಎಣಿಕೆಗಾಗಿ ಮಾನವ ಅಂಗಾಂಶವನ್ನು ಪರೀಕ್ಷಿಸಲು ವಿಜ್ಞಾನಿಗಳಿಗೆ ಸಾಧ್ಯವಾಗಲಿಲ್ಲ. ಆದಾಗ್ಯೂ, ಅವರು ನಾಯಿಗಳ ಮಾದರಿಗಳನ್ನು ಪರಿಶೀಲಿಸಿದರು. ವಿಜ್ಞಾನಿಗಳು ನಾಯಿಯ ಮಾದರಿಗಳಲ್ಲಿ ಹೆಚ್ಚಿನ ಮಟ್ಟದ ಪಾಲಿವಿನೈಲ್ ಕ್ಲೋರೈಡ್ (PVC) ಪ್ಲಾಸ್ಟಿಕ್ ಅನ್ನು ಪತ್ತೆ ಮಾಡಿದ್ದಾರೆ. ಇದು ಪ್ರಾಣಿಗಳಲ್ಲಿ ಸ್ಪರ್ಮ್ ಕೌಂಟ್ ಕಡಿಮೆಯಾಗಲು ಕಾರಣವಾಗಿದೆ.
ವಿಜ್ಞಾನಿಗಳು ಈಗ ನಾಯಿ ಮತ್ತು ಮಾನವ ವೃಷಣಗಳನ್ನು ಹೋಲಿಕೆ ಮಾಡಲು ಮುಂದಾಗಿದ್ದಾರೆ. ವೈಜ್ಞಾನಿಕ ದತ್ತಾಂಶವನ್ನು ನೀಡುವ ಮೂಲಕ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ.