ಯಾವುದೇ ಥ್ರಿಲ್ಲರ್ ಸಿನಿಮಾ ಕಥೆಗೆ ಹೋಲಿಸಬಲ್ಲ ನಿದರ್ಶನವೊಂದು ಬ್ರಿಟನ್ ನಲ್ಲಿ ಜರುಗಿದೆ.
ತಾನು ಕಿಡ್ನಾಪ್ ಆಗಿರುವುದಾಗಿ ಸುಳ್ಳು ಕಥೆ ಸೃಷ್ಟಿಸಿದ 23 ವರ್ಷದ ಯುವಕನೊಬ್ಬ ತನಗೆ ಚಿತ್ರಹಿಂಸೆ ಕೊಡುತ್ತಿದ್ದಾರೆ ಎಂದು ಹೇಳಿಕೊಳ್ಳಲು ಹುಸಿ ಚಿತ್ರಗಳನ್ನು ಕಳುಹಿಸಿಕೊಟ್ಟು ಸುದ್ದಿಯಾಗಿದ್ದಾನೆ.
ಕ್ರಿಸ್ಟೋಫರ್ ಸೆಲ್‌ಮ್ಯಾನ್ ಎಂದು ಗುರುತಿಸಲಾದ ಆಪಾದಿತ, ತನ್ನ ಸುಳ್ಳುಗಳ ಸರಮಾಲೆಗೆ ಪೂರಕವಾಗಿ ವಿಡಿಯೋಗಳು ಹಾಗೂ ಚಿತ್ರಗಳನ್ನು ಸೃಷ್ಟಿಸಿ ಇಬ್ಬರು ವ್ಯಕ್ತಿಗಳಿಂದ 10,000 ಪೌಂಡ್ ಕೀಳುವ ಯತ್ನ ಮಾಡಿದ್ದಾನೆ.
ತನ್ನ ಕುತ್ತಿಗೆ ಬಳಿ ರೇಜ಼ರ್ ಬ್ಲೇಡ್ ಹಿಡಿದಿರುವಂತೆ ಚಿತ್ರವೊಂದು ತೋರುತ್ತಿದ್ದು, ಮತ್ತೊಂದು ಚಿತ್ರದಲ್ಲಿ ಇನ್ನೊಂದು ರೀತಿಯ ಚಿತ್ರಹಿಂಸೆ ಅನುಭವಿಸುತ್ತಿರುವಂತೆ ತೋರಲಾಗಿದೆ. ಸ್ಟೆಫಾನಿ ಗಿಬ್ ಹೆಸರಿನ ತನ್ನ ಒಡನಾಡಿಯೊಂದಿಗೆ ಸೆಲ್‌ಮ್ಯಾನ್ ಹೀಗೆ ಮಾಡಿದ್ದಾನೆ.
ಅನಾಮಿಕ ಸಂಖ್ಯೆಯೊಂದರಿಂದ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಸ್ವೀಕರಿಸಿದ ಇಬ್ಬರು ಸಂತ್ರಸ್ತರಿಗೆ, ಸೆಲ್‌ಮ್ಯಾನ್ ಅಪಹೃತನಾಗಿದ್ದು, ದೊಡ್ಡದೊಂದು ಮೊತ್ತವನ್ನು ಬ್ಯಾಂಕಿಗೆ ವರ್ಗಾವಣೆ ಮಾಡಿದ ಬಳಿಕವೇ ಆತನ ಬಿಡುಗಡೆಯಾಗುವುದಾಗಿ ಮೆಸೇಜ್‌ನಲ್ಲಿ ಹೇಳಲಾಗಿತ್ತು. ಈ ಉಪಾಯಕ್ಕೆ ಬೇಸ್ತು ಬಿದ್ದ ಸಂತ್ರಸ್ತರು ಸಂದೇಶದಲ್ಲಿ ತಿಳಿಸಿದಂತೆ ಮಾಡಿದ್ದಾರೆ.
ಜಗನ್ನಾಥ ದೇಗುಲದಲ್ಲಿ ಆರತಿ ಬೆಳಗಿದ ಅಮಿತ್ ಶಾ
ಆದರೆ ಕೂಡಲೇ ಇನ್ನಷ್ಟು ದುಡ್ಡು ಕಳುಹಿಸುವಂತೆ ಬೇಡಿಕೆ ಇಟ್ಟಿದ್ದಾನೆ ಕಿಡಿಗೇಡಿ. ಇನ್ನೊಂದು ಸಂದೇಶದಲ್ಲಿ ಸೆಲ್‌ಮ್ಯಾನ್ ಬಾಯಿಗೆ ಗನ್ ಹಿಡಿದಂತೆ ತೋರುವ ಮತ್ತೊಂದು ಚಿತ್ರವನ್ನು ಸ್ವೀಕರಿಸಿದ್ದಾರೆ. ಈ ಬಾರಿ ಇ-ಮೇಲ್, ಸಾಮಾಜಿಕ ಜಾಲತಾಣದ ಇನ್ನಷ್ಟು ಪ್ಲಾಟ್‌ಫಾರಂಗಳಿಂದ ಸಂದೇಶ ಸ್ವೀಕರಿಸಿದ್ದಾರೆ ಸಂತ್ರಸ್ತರು.
ಕೆಂಟ್ ಪೊಲೀಸರಿಗೆ ಸಂತ್ರಸ್ತರು ದೂರು ಕೊಟ್ಟು ತಮ್ಮ ಸಂಖ್ಯೆಗಳನ್ನು ಬದಲಿಸಿದ್ದಾರೆ. ಆದರೆ ಬಳಿಕವೂ ಸಂದೇಶಗಳು ಬರುವುದು ನಿಂತಿಲ್ಲ. ಸಂದೇಶಗಳನ್ನು ಸೂಕ್ಷ್ಮವಾಗಿ ಗಮನಿಸಿ ತ್ವರಿತ ತನಿಖೆ ಮೂಲಕ ಸೆಲ್‌ಮ್ಯಾನ್‌ನ ವಿಳಾಸ ಪತ್ತೆ ಮಾಡಿ, ಆತನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದ ಆಪಾದನೆ ಮೇಲೆ ಬಂಧಿಸಲಾಗಿದೆ. ಇದೇ ವೇಳೆ ಫೋಟೋ ಹಾಗೂ ವಿಡಿಯೋಗಳಲ್ಲಿ ಬಳಸಿದ್ದ ಶಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದುಬಾರಿ ಬೆಲೆಯ ಕ್ರೀಡಾ ಉಡುಪುಗಳನ್ನು ಖರೀದಿ ಮಾಡಲು ಸೆಲ್‌ಮ್ಯಾನ್ ಮತ್ತು ಆತನ ಸಹಚರೆ ಹೀಗೆ ಪ್ಲಾನ್ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದೆ.