ಭೋಪಾಲ್ : ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಪಿಕ್ನಿಕ್’ ಗೆ ತೆರಳಿದ್ದ ಮೂವರು ಚಿರತೆ ದಾಳಿಯಿಂದ ಗಾಯಗೊಂಡಿರುವ ಘಟನೆ ಕಳೆದ ಭಾನುವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಓರ್ವ ಮಹಿಳೆ ಹಾಗೂ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರ ತಲೆಗೆ ಗಂಭೀರ ಗಾಯಗಳಾಗಿವೆ.ವರದಿಯ ಪ್ರಕಾರ, ಜಬಲ್ಪುರದಿಂದ 150 ಕಿ.ಮೀ ದೂರದಲ್ಲಿರುವ ಸೊಹಾಗ್ಪುರ ನದಿತೀರದ ಗ್ರಾಮದ ಬಳಿಯ ಖಿತೌಲಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
30 ಸೆಕೆಂಡುಗಳ ವೈರಲ್ ಕ್ಲಿಪ್ನಲ್ಲಿ ಚಿರತೆ ಪ್ರವಾಸಿಗರತ್ತ ಧಾವಿಸುತ್ತಿರುವುದನ್ನು ತೋರಿಸುತ್ತದೆ, ಅವರು ಪೊದೆಗಳಲ್ಲಿ ಚಿರತೆಗಳನ್ನು ನೋಡಿದ ಕೂಡಲೇ “ಆ ಜಾ, ಆ ಜಾ” ಎಂದು ಕೂಗುತ್ತಿದ್ದರು. ಇದ್ದಕ್ಕಿದ್ದಂತೆ, ಚಿರತೆ ಅವರ ಬಳಿ ಜಿಗಿದು ದಾಳಿ ನಡೆಸಿದೆ. ಕೂಡಲೇ ಪ್ರವಾಸಿಗರು ಕಿರುಚಾಡಿದ್ದಾರೆ. ದಾಳಿ ನಡೆಸಿದ ಬಳಿಕ ಚಿರತೆ ಅಲ್ಲಿಂದ ಓಡಿ ಹೋಗಿದೆ.
ಘಟನೆಯಲ್ಲಿ ಶಹದೋಲ್ ಪೊಲೀಸ್ನ ಎಎಸ್ಐ ನಿತಿನ್ ಸಮ್ದಾರಿಯಾ (35), ಆಕಾಶ್ ಕುಶ್ವಾಹ (23) ಮತ್ತು ನಂದಿನಿ ಸಿಂಗ್ (25) ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಭಯಭೀತರಾಗಿ ಓಡುವಾಗ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.