ಇತ್ತೀಚೆಗಷ್ಟೇ ಐಸ್ ಕ್ರೀಂ ನಲ್ಲಿ ತುಂಡಾದ ಬೆರಳು ಪತ್ತೆಯಾಗಿತ್ತು, ಈ ಬೆನ್ನಲ್ಲೇ ಇದೀಗ ಚಾಕೊಲೇಟ್ ನಲ್ಲಿ ಹಲ್ಲಿನ ಸೆಟ್ ಪತ್ತೆಯಾಗಿದೆ.
ಮಧ್ಯಪ್ರದೇಶದ ಖಾರ್ಗೋನ್ ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನಿವೃತ್ತ ಪ್ರಾಂಶುಪಾಲರೊಬ್ಬರು ಚಾಕೊಲೇಟ್ ನಲ್ಲಿ ಹಲ್ಲಿನ ಸೆಟ್ ನ್ನು ಪತ್ತೆ ಮಾಡಿದ್ದಾರೆ. ವರದಿ ಪ್ರಕಾರ, ಸರ್ಕಾರೇತರ ಸಂಸ್ಥೆಯ ಸ್ವಯಂಸೇವಕಿ ಮಾಯಾದೇವಿ ಗುಪ್ತಾ ಅವರು ಮಗುವಿನ ಜನ್ಮದಿನದಂದು ಚಾಕೊಲೇಟ್ ಸ್ವೀಕರಿಸಿದರು. ಕೆಲವು ದಿನಗಳ ನಂತರ ಅವರು ಚಾಕೊಲೇಟ್ ತಿನ್ನುವಾಗ ಹಲ್ಲಿಗೆ ಗಟ್ಟಿಯಾದ ವಸ್ತು ಸಿಕ್ಕಿದೆ. ಕೊನೆಗೆ ನೋಡಿದಾಗ ಅದು ಹಲ್ಲಿನ ಸೆಟ್ ಆಗಿತ್ತು.
“ನಾನು ಜನಪ್ರಿಯ ಬ್ರಾಂಡ್ ಕಾಫಿ-ರುಚಿಯ ಚಾಕೊಲೇಟ್ ಪಡೆದಿದ್ದೇನೆ. ಚಾಕೊಲೇಟ್ ತಿಂದ ನಂತರ, ನಾನು ಕುರುಕಲು ಚಾಕೊಲೇಟ್ ತುಂಡಿನಂತೆ ಭಾವಿಸಿದೆ. ಆದರೆ, ನಾನು ಅದನ್ನು ಮತ್ತೊಮ್ಮೆ ಜಗಿಯಲು ಪ್ರಯತ್ನಿಸಿದಾಗ ನನಗೆ ಕಷ್ಟವಾಯಿತು. ಕೊನೆಗೆ ನಾನು ಅದನ್ನು ಹೊರತೆಗೆದು ನೋಡಿದಾಗ ಅದು ಹಲ್ಲಿನ ಸೆಟ್ ಎಂಬುದು ನೋಡಿ ಆಘಾತವಾಯಿತು” ಎಂದು ಮಾಯಾದೇವಿ ತಿಳಿಸಿದ್ದಾರೆ.ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿದ್ಯಾರ್ಥಿಯೊಬ್ಬರು ಗುಪ್ತಾಗೆ ಚಾಕೊಲೇಟ್ ನೀಡಿದ್ದರು.
ಎನ್ಜಿಒ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ವಿದ್ಯಾರ್ಥಿಯೊಬ್ಬರು ಗುಪ್ತಾಗೆ ಚಾಕೊಲೇಟ್ ನೀಡಿದರು, ಘಟನೆಯ ನಂತರ, ಅವರು ಈ ವಿಷಯವನ್ನು ಖಾರ್ಗೋನ್ನ ಜಿಲ್ಲಾ ಆಹಾರ ಮತ್ತು ಔಷಧ ಇಲಾಖೆಗೆ ವರದಿ ಮಾಡಿದ್ದಾರೆ.ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತದ ಅಧಿಕಾರಿ ಎಚ್.ಎಲ್.ಅವಾಸಿಯಾ ಹೇಳಿದ್ದಾರೆ. ಈ ವಿಷಯವನ್ನು ಪರಿಶೀಲಿಸಲು ತಂಡವನ್ನು ನಿಯೋಜಿಸಲಾಗಿದೆ ಮತ್ತು ಚಾಕೊಲೇಟ್ಗಳನ್ನು ಖರೀದಿಸಿದ ಅಂಗಡಿಯಿಂದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಈ ಮಾದರಿಗಳನ್ನು ಹೆಚ್ಚಿನ ವಿಶ್ಲೇಷಣೆಗಾಗಿ ಇಲಾಖೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ.