ಚಿತ್ರಕೂಟದ ಆಸ್ಪತ್ರೆಯಲ್ಲಿ 25 ವರ್ಷದ ಮಹಿಳೆಯ ಹೊಟ್ಟೆಯಿಂದ ಎರಡೂವರೆ ಕೆಜಿ ಕೂದಲನ್ನು ಹೊರತೆಗೆಯಲಾಗಿದ್ದು, ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ.
ವರದಿಗಳ ಪ್ರಕಾರ, ಮಹಿಳೆಗೆ ಕೂದಲನ್ನು ತಿನ್ನುವ ಅಭ್ಯಾಸ ಇತ್ತಂತೆ. ಅವಳು ತನ್ನ ಕೂದಲನ್ನು ತಿನ್ನುವುದು ಮಾತ್ರವಲ್ಲದೆ ಇತರ ಜನರ ಕೂದಲನ್ನು ಸಹ ತಿನ್ನುತ್ತಿದ್ದಳಂತೆ. ನಂತರ ಹೊಟ್ಟೆಯಲ್ಲಿ ವಿಪರೀತ ನೋವು ಕಂಡು ಬಂದಾಗ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗಿದ್ದಾರೆ.
ಚಿತ್ರಕೂಟದ ಕುಂಡ್ ಸದ್ಗುರು ಆಸ್ಪತ್ರೆಯ ಹಿರಿಯ ವೈದ್ಯ ಡಾ.ನಿರ್ಮಲಾ ಗೆಹಾನಿ ಅವರು ಆಕೆಗೆ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯಿಂದ 2.5 ಕೆಜಿ ಕೂದಲನ್ನು ಹೊರತೆಗೆದಿದ್ದಾರೆ. ಮಹಿಳೆ ಯುಪಿಯ ಮಹೋಬಾ ನಿವಾಸಿ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಮೂರು ಮಕ್ಕಳನ್ನು ಹೊಂದಿರುವ ಮಹಿಳೆ ತನ್ನ ಮೂರನೇ ಗರ್ಭಾವಸ್ಥೆಯಲ್ಲಿ ಕೂದಲನ್ನು ತಿನ್ನಲು ಪ್ರಾರಂಭಿಸಿದಳು ಎಂದು ಡಾ. ಡಾ.ನಿರ್ಮಲಾ ಗೆಹಾನಿ ಹೇಳಿದ್ದಾರೆ. ಎರಡನೇ ಹೆರಿಗೆಯ ನಂತರ, ಅವಳು ಕೂದಲು ತಿನ್ನುವುದನ್ನು ನಿಲ್ಲಿಸಿದಳು, ಆದರೆ ಅವಳು ತೀವ್ರ ಹೊಟ್ಟೆ ನೋವು ಮತ್ತು ವಾಕರಿಕೆಯಿಂದ ಬಳಲುತ್ತಿದ್ದಳು.ಸಿಟಿ ಸ್ಕ್ಯಾನ್ ಗೆ ಒಳಗಾಗುವಂತೆ ಡಾ.ಗೆಹಾನಿ ಸಲಹೆ ನೀಡಿದಾಗ ಅವರ ರೋಗ ಪತ್ತೆಯಾಗಿದೆ.
ಡಾ.ಗೆಹಾನಿ ಅವರ ಪ್ರಕಾರ, ಅಂತಹ ರೋಗವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಟ್ರೈಕೋಬೆಜೋರ್ ಎಂದು ಕರೆಯಲಾಗುತ್ತದೆ . ಅಂತಹ ರೋಗಿಗಳು ಕೆಲವು ಮಾನಸಿಕ ಸಮಸ್ಯೆಗಳನ್ನು ಹೊಂದಿದ್ದಾರೆ, ಈ ರೋಗವು ಒಂದು ಪ್ರತಿಶತದಷ್ಟು ಜನರಲ್ಲಿ ಕಂಡುಬರುತ್ತದೆ ಎಂದು ಅವರು ಹೇಳಿದರು.