ಭಾನುವಾರಗಳಂದು ಕೆಲಸ ಮಾಡುವಂತೆ ಎಲ್ & ಟಿ ಅಧ್ಯಕ್ಷರು ನೀಡಿದ ಕರೆಯನ್ನು ನಟಿ ದೀಪಿಕಾ ಪಡುಕೋಣೆ ಟೀಕಿಸಿದ್ದಾರೆ.
ಲಾರ್ಸೆನ್ & ಟೂಬ್ರೊ(ಎಲ್ & ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಅವರು ನೌಕರರ ಕೆಲಸ-ಜೀವನ ಸಮತೋಲನದ ಬಗ್ಗೆ ಇತ್ತೀಚೆಗೆ ಮಾಡಿದ ಹೇಳಿಕೆಯ ಬಗ್ಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಕಳವಳ ವ್ಯಕ್ತಪಡಿಸಿದ್ದು, ಆಘಾತಕಾರಿ ಎಂದು ಹೇಳಿದ್ದಾರೆ.
ಉದ್ಯೋಗಿಗಳೊಂದಿಗಿನ ಸಭೆಯಲ್ಲಿ, ಸುಬ್ರಹ್ಮಣ್ಯನ್ ಅವರು ಯಶಸ್ವಿಯಾಗಲು ನೌಕರರು ವಾರದಲ್ಲಿ ಏಳು ದಿನಗಳು ಕೆಲಸ ಮಾಡಲು ಸಿದ್ಧರಿರಬೇಕು. ಭಾನುವಾರಗಳು ಸೇರಿದಂತೆ 90 ಗಂಟೆಗಳ ಕೆಲಸದ ವಾರವನ್ನು ಪ್ರತಿಪಾದಿಸಿದ್ದಾರೆ.
ಭಾನುವಾರಗಳಂದು ನಿಮ್ಮಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ವಿಷಾದವಿದೆ. ಭಾನುವಾರಗಳಂದು ನಾನು ನಿಮ್ಮನ್ನು ಕೆಲಸ ಮಾಡುವಂತೆ ಮಾಡಲು ಸಾಧ್ಯವಾದರೆ, ನಾನು ಹೆಚ್ಚು ಸಂತೋಷಪಡುತ್ತೇನೆ. ನೀವು ಮನೆಯಲ್ಲಿ ಕುಳಿತು ಏನು ಮಾಡುತ್ತೀರಿ? ನಿಮ್ಮ ಹೆಂಡತಿಯನ್ನು ಎಷ್ಟು ಹೊತ್ತು ದಿಟ್ಟಿಸಿ ನೋಡಬಲ್ಲಿರಿ? ಎಂದು ಎಲ್ & ಟಿ ಮುಖ್ಯಸ್ಥರು ಉದ್ಯೋಗಿಗಳೊಂದಿಗಿನ ಸಂವಾದದ ಸಂದರ್ಭದಲ್ಲಿ ಹೇಳಿದ್ದರು.
ಇದಕ್ಕೆ ದೀಪಿಕಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲಸ-ಜೀವನ ಸಮತೋಲನ ಮತ್ತು ಮಾನಸಿಕ ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದ್ದಾರೆ. ಇಂತಹ ಹಿರಿಯ ಹುದ್ದೆಗಳಲ್ಲಿರುವ ಜನರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನೋಡುವುದು ಆಘಾತಕಾರಿಯಾಗಿದೆ ಎಂದಿದ್ದಾರೆ.
ಎಸ್.ಎನ್. ಸುಬ್ರಹ್ಮಣ್ಯನ್ ಅವರ ಹೇಳಿಕೆಗಳು ಕೆಲಸ-ಜೀವನ ಸಮತೋಲನದ ಕುರಿತು ನಡೆಯುತ್ತಿರುವ ಚರ್ಚೆಯ ಬೆಂಕಿಗೆ ತುಪ್ಪ ಸುರಿದಿದೆ. ಇದನ್ನು ಮೊದಲು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ 70 ಗಂಟೆಗಳ ಕೆಲಸದ ಬಗ್ಗೆ ಪ್ರಸ್ತಾಪಿಸಿದ್ದರು.