ದಲಿತ ಜಾತಿಯ ವರನ ಮದುವೆ ಮೆರವಣಿಗೆಯು ಮೇಲ್ಜಾತಿ ಸಮುದಾಯದ ಪ್ರಾಬಲ್ಯವಿರುವ ಪ್ರದೇಶದಲ್ಲಿ ಸಾಗುತ್ತಿದ್ದಾಗ ಹಿಂಸಾಚಾರ ನಡೆದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.
ಮೇ 20 ರ ರಾತ್ರಿ ನಡೆದ ಈ ಘಟನೆಯು ಆಕ್ರೋಶವನ್ನು ಹುಟ್ಟುಹಾಕಿದ್ದು ನ್ಯಾಯಕ್ಕಾಗಿ ಕೂಗು ಎದ್ದಿದೆ. ಮದುವೆ ಮೆರವಣಿಗೆ ಸಾಗ್ತಿದ್ದಂತೆ ಮೇಲ್ಜಾತಿ ಸಮುದಾಯದ ಕೆಲವು ವ್ಯಕ್ತಿಗಳು ವರ ಮತ್ತು ಅವರ ಅತಿಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಂದೂಕುಗಳಿಂದ ಗುಂಡು ಹಾರಿಸುವುದು, ಚಾಕುಗಳನ್ನು ಹಿಡಿದು ಆಕ್ರಮಣಕಾರಿ ರೀತಿಯಲ್ಲಿ ದಾಳಿ ಮಾಡಿದ್ದಾರೆ ಎನ್ನಲಾಗಿದೆ.
ದಾಳಿಕೋರರು ವರನನ್ನು ಗುರಿಯಾಗಿಸಿಕೊಂಡು ಕುದುರೆ ಗಾಡಿಯನ್ನು ಧ್ವಂಸಗೊಳಿಸಿ ಚರಂಡಿಗೆ ಎಸೆದಿದ್ದಾರೆ ಎಂದು ವರದಿಗಳು ಸೂಚಿಸುತ್ತವೆ. ದಾಳಿ ವೇಳೆ ವರ ಮತ್ತು ಆತನ ಬಳಗದವರಿಗೆ ಗಾಯಗಳಾಗಿವೆ. ಆಘಾತಕಾರಿ ಸಂಗತಿಯೆಂದರೆ ದಾಳಿಕೋರರು ವರನ ಚಿನ್ನದ ಸರ ಸೇರಿದಂತೆ ಸ್ವತ್ತುಗಳನ್ನು ಲೂಟಿ ಮಾಡಿದ್ದಾರೆ. ಇಷ್ಟೇ ಅಲ್ಲದೇ ಆಕ್ರಮಣಕಾರರು ಮದುವೆಯ ಡಿಜೆ ಸಲಕರಣೆಗಳನ್ನೂ ಹಾಳು ಮಾಡಿದ್ದಾರೆ.
ಪೊಲೀಸರು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಂತ್ರಸ್ತ ಕುಟುಂಬದ ಪರವಾಗಿ ವರನ ಸಹೋದರ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಮದುವೆಗೆ ಬಂದ ಅತಿಥಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಪ್ರತಿದೂರು ಕೂಡ ದಾಖಲಾಗಿದ್ದು, ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.
ವರನ ಮದುವೆ ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ಉಂಟಾದ ಹಿಂಸಾಚಾರ ಸಾಮಾಜಿಕ ಉದ್ವಿಗ್ನತೆಯನ್ನು ಉಂಟುಮಾಡಿತ್ತು.