
ಚೆನ್ನೈ: ಚೆನ್ನೈನಿಂದ ವರದಿಯಾದ ಆಘಾತಕಾರಿ ಪ್ರಕರಣವೊಂದರಲ್ಲಿ ಮಹಿಳೆಯೊಬ್ಬಳು ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಪ್ರಿಯಕರನಿಗೆ ಅವಕಾಶ ನೀಡಿದ್ದಾಳೆ. ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಬುಧವಾರ ಮಡಿಪಕ್ಕಂ ಮಹಿಳಾ ಪೊಲೀಸರು ಬಂಧಿಸಿದ್ದಾರೆ.
36 ವರ್ಷದ ಮಹಿಳೆ ಕೆಲವು ವರ್ಷಗಳ ಹಿಂದೆ ಗಂಡನಿಂದ ದೂರವಾಗಿದ್ದು, ಶೋಲಿಂಗನಲ್ಲೂರ್ ನಲ್ಲಿ ವಾಸವಾಗಿದ್ದಾಳೆ. ಆಕೆ 32 ವರ್ಷದ ಶೇಖರ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದಳು. ಮಹಿಳೆ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ ಶೇಖರ್ ಮಹಿಳೆಯ 15 ವರ್ಷ ವಯಸ್ಸಿನ ಹಿರಿಯ ಮಗಳನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಆರಂಭಿಸಿದ್ದಾನೆ. ಈ ಬಗ್ಗೆ ಹುಡುಗಿ ತನ್ನ ತಾಯಿಗೆ ತಿಳಿಸಿದಾಗ ಆತನಿಗೆ ಸಹಕರಿಸುವಂತೆ ಕೇಳಿಕೊಂಡಿದ್ದಾಳೆ. ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ನಂತರದಲ್ಲಿ ಬಾಲಕಿ ಗರ್ಭಿಣಿಯಾಗಿದ್ದು, ತಾಯಿ ತನ್ನ ಸಹೋದರನ ಮನೆಯಲ್ಲಿ ಮಗಳನ್ನು ಬಿಟ್ಟು ಗೆಳೆಯನೊಂದಿಗೆ ಪರಾರಿಯಾಗಿದ್ದಾಳೆ.
ತಾನು ಗರ್ಭಿಣಿಯಾದ ಬಗ್ಗೆ ಹುಡುಗಿ ಮಾವನಿಗೆ ತಿಳಿಸಿದ್ದು, ಆತ ಆಕೆಯ ತಾಯಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮಡಿಪಕ್ಕಂ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಅಕ್ಟೋಬರ್ ನಲ್ಲಿ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ.
ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ಸೋ) ಕಾಯ್ದೆ ಸಂಬಂಧಿತ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ನಿರಂತರ ಹುಡುಕಾಟದ ನಂತರ ಡಿಸೆಂಬರ್ 30 ರಂದು ಬಾಲಕಿಯ ತಾಯಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.