ಜಾರ್ಖಂಡ್‌ನ ಸಿಂಗ್‌ಭೂಮ್‌ನಲ್ಲಿ ಸಿಹಿ ಸಿಹಿ ರಸಗುಲ್ಲಾ 17 ವರ್ಷದ ಹುಡುಗನ ಪ್ರಾಣವನ್ನೇ ತೆಗೆದಿದೆ. ಇದಕ್ಕೆ ಕಾರಣವಾಗಿದ್ದು ಮೊಬೈಲ್ ಗೇಮ್‌ಗಳ ಹುಚ್ಚು. ಪತ್ಮಹೂಲಿಯಾ ಎಂಬ ಗ್ರಾಮದ ಅಮಿತ್ ಎಂಬ ಹುಡುಗ ಆರಾಮಾನಿ ಹಾಸಿಗೆಯ ಮೇಲೆ ಮಲಗಿಕೊಂಡು ಮೊಬೈಲ್‌ನಲ್ಲಿ ಗೇಮ್ಸ್ ಆಡುತ್ತಿದ್ದ.
ಹೊರರಾಜ್ಯದಲ್ಲಿ ನೌಕರಿ ಮಾಡುತ್ತಿದ್ದ ಆತನ ಚಿಕ್ಕಪ್ಪ 3 ತಿಂಗಳ ಬಳಿಕ ಮನೆಗೆ ಮರಳಿದ್ದರು. ಈ ವೇಳೆ ರಸಗುಲ್ಲಾ ತಂದಿದ್ದಾರೆ. ಮೊಬೈಲ್‌ನಲ್ಲಿ ಗೇಮ್ ಆಡುತ್ತಲೇ ಅಮಿತ್ ರಸಗುಲ್ಲಾವನ್ನು ಬಾಯಿಗೆ ಹಾಕಿಕೊಂಡಿದ್ದಾನೆ. ಆಕಸ್ಮಿಕವಾಗಿ ಅದು ಗಂಟಲಲ್ಲಿ ಸಿಕ್ಕಿಹಾಕಿಕೊಂಡಿದೆ. ಅಮಿತ್ ಉಸಿರಾಡಲು ಸಾಧ್ಯವಾಗದೇ ಒದ್ದಾಡಿದ್ದಾನೆ.
ಆತನ ಚಿಕ್ಕಪ್ಪ ರೋಹಿಣಿ ಸಿಂಗ್, ಗಂಟಲಿನಲ್ಲಿ ಬೆರಳು ಹಾಕಿ ರಸಗುಲ್ಲಾವನ್ನು ಹೊರತೆಗೆಯಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಸ್ವಲ್ಪ ಹೊತ್ತಿನ ಬಳಿಕ ವಾಂತಿ ಮಾಡಿಕೊಂಡ ಅಮಿತ್ ಪ್ರಜ್ಞೆತಪ್ಪಿ ಬಿದ್ದಿದ್ದ. ಈ ಸಮಯದಲ್ಲಿ ಅಮಿತ್ ಮತ್ತಾತನ ಚಿಕ್ಕಪ್ಪನನ್ನು ಬಿಟ್ಟರೆ ಮನೆಯಲ್ಲಿ ಇನ್ಯಾರೂ ಇರಲಿಲ್ಲ.
ಕೂಡಲೇ ನೆರೆಹೊರೆಯವರೆಲ್ಲ ಸೇರಿ ಅಮಿತ್‌ನನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಆಸ್ಪತ್ರೆ ತಲುಪುವಷ್ಟರಲ್ಲಿ ಅಮಿತ್ ಮೃತಪಟ್ಟಿದ್ದ. ರಸಗುಲ್ಲಾದಿಂದಾಗಿ ಉಸಿರುಗಟ್ಟಿ ಆತ ಸಾವನ್ನಪ್ಪಿದ್ದಾನೆ. ಅಮಿತ್ ತನ್ನ ತಂದೆ – ತಾಯಿಗೆ ಒಬ್ಬನೇ ಮಗ. ರಕ್ಷಾಬಂಧನ ಹಬ್ಬದ ಸಮಯದಲ್ಲೇ ನಡೆದ ಈ ದುರಂತ ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಸಿದೆ.