ಬೆಂಗಳೂರು : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧ ದಂಪತಿಯನ್ನು ಮಗನೇ ಕೊಲೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ರಾಮಕೃಷ್ಣಪ್ಪ (70) ಮತ್ತು ಅವರ ಪತ್ನಿ ಮುನಿರಾಮಕ್ಕ (65) ಎಂದು ಗುರುತಿಸಲಾಗಿದೆ. ಈ ಆಸ್ತಿಯನ್ನು ತಮ್ಮ ಹೆಣ್ಣುಮಕ್ಕಳಿಗೂ ಹಂಚಲು ನಿರ್ಧರಿಸಿದ ನಂತರ ದಂಪತಿಯನ್ನು ಅವರ ಮಗ ನರಸಿಂಹ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ .
ರಾಮಕೃಷ್ಣಪ್ಪ ಮತ್ತು ಮುನಿರಾಮಕ್ಕ ದಂಪತಿಗೆ ನಾಲ್ವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಇದ್ದರು. 17 ವರ್ಷಗಳ ಹಿಂದೆ ಮದುವೆಯಾಗಿದ್ದ ಮಗ ಮನೆಯಿಂದ ಹೊರಹೋದ ನಂತರ ಸೂಲಿಬೆಲೆಯ ಮನೆಯೊಂದರಲ್ಲಿ ಇಬ್ಬರೇ ವಾಸಿಸುತ್ತಿದ್ದರು.
ವೃದ್ಧ ದಂಪತಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದ್ದು, ತಮ್ಮ ಹೆಣ್ಣುಮಕ್ಕಳು ಮನೆಗೆ ಕರೆ ಮಾಡಿದಾಗ ದಂಪತಿಗಳು ಫೋನ್ ಗೆ ಉತ್ತರಿಸದಿದ್ದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ದಂಪತಿಯ ಪುತ್ರಿಯರಲ್ಲಿ ಒಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಶಂಕಿತ ನರಸಿಂಹನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
“ವಾಲ್ಮೀಕಿ ನಗರದ ಮನೆಯೊಂದರಲ್ಲಿ ವೃದ್ಧ ದಂಪತಿಯ ಕೊಲೆಯ ಬಗ್ಗೆ ನಮಗೆ ದೂರು ಬಂದಿದೆ. ಅವರ ಮಗ ಕಳೆದ 18 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಅವರಲ್ಲಿ ಒಬ್ಬರು ದೂರು ದಾಖಲಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.