ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೇಲೆ ಸರ್ಕಾರಿ ಶಾಲಾ ಟಾಯ್ಲೆಟ್ ನಲ್ಲಿ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ. ಬಾಲಕಿ ಕೇವಲ ಆರು ದಿನಗಳ ಹಿಂದಷ್ಟೇ ಈ ಶಾಲೆಗೆ ಸೇರಿಕೊಂಡಿದ್ದಳು ಎಂದು ಹೇಳಲಾಗಿದೆ.
ಶುಕ್ರವಾರ ಮಧ್ಯಾಹ್ನ ಊಟಕ್ಕೆ ಬಿಟ್ಟ ವೇಳೆ ಎಂಟೂವರೆ ವರ್ಷದ ಈ ಬಾಲಕಿ ಟಾಯ್ಲೆಟ್ ಗೆ ಹೋಗಿದ್ದು ಈ ಸಂದರ್ಭದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಬಾಲಕಿ ಜೋರಾಗಿ ಅಳುತ್ತಿದ್ದನ್ನು ಕಂಡು ಸಹಪಾಠಿಗಳು ಶಿಕ್ಷಕರಿಗೆ ವಿಷಯ ತಿಳಿಸಿದ ವೇಳೆ ಘಟನೆ ಬೆಳಕಿಗೆ ಬಂದಿದೆ.
ಶಿಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಕೂಡಲೇ ಧಾವಿಸಿ ಬಂದ ಅವರು ಬಾಲಕಿಯನ್ನು ಪ್ರಶ್ನಿಸಿದಾಗ ಆರೋಪಿ ಹಳದಿ ಶರ್ಟ್ ಧರಿಸಿದ್ದರ ಕುರಿತು ಮಾಹಿತಿ ನೀಡಿದ್ದಾಳೆ. ಆಗ ಆತ ಈ ಸರ್ಕಾರಿ ಶಾಲೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿದ್ದ ಮಹಿಳೆ ಪತಿ ಲಕ್ಷ್ಮೀನಾರಾಯಣ್ ಎಂಬುದಾಗಿ ತಿಳಿದು ಬಂದಿದೆ.
ಲಕ್ಷ್ಮೀನಾರಾಯಣ್, ಇದೇ ಶಾಲೆಯಲ್ಲಿ ವಾಚ್ ಮ್ಯಾನ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದ್ದು, ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ ವೇಳೆ ತನ್ನ ತಪ್ಪೊಪ್ಪಿಕೊಂಡಿದ್ದಾನೆ.