ಯುಟ್ಯೂಬ್ ವಿಡಿಯೋ ನೋಡಿಕೊಂಡೇ 17 ವರ್ಷದ ಅಪ್ರಾಪ್ತೆ ಮಗುವಿಗೆ ಜನ್ಮ ನೀಡಿದ ಶಾಕಿಂಗ್ ಘಟನೆಯು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಪ್ರಿಯತಮನಿಂದ ಅಪ್ರಾಪ್ತೆ ಗರ್ಭ ಧರಿಸಿದ್ದಳು ಎನ್ನಲಾಗಿದೆ. ಅಕ್ಟೋಬರ್ 20ರಂದು ಮಗುವಿಗೆ ಜನ್ಮ ನೀಡಿದ ಹುಡುಗಿಯಲ್ಲಿ 2 ದಿನಗಳ ಬಳಿಕ ಕೆಲ ಸೋಂಕು ಕಾಣಿಸಿಕೊಂಡಿದ್ದು ಆಗ ಪ್ರಕರಣ ಬೆಳಕಿಗೆ ಬಂದಿದೆ.
ಹುಡುಗಿ ತಾಯಿ ಆಕೆಯನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯ ವೇಳೆ ಈ ಹುಡುಗಿ ಹೆರಿಗೆ ಸಂದರ್ಭದಲ್ಲಿ ಯಾರದ್ದೂ ಸಹಾಯ ಪಡೆದಿರಲಿಲ್ಲ. ಯುಟ್ಯೂಬ್ ವಿಡಿಯೋ ನೋಡಿಯೇ ಕರಳುಬಳ್ಳಿಯನ್ನು ಕತ್ತರಿಸಿದ್ದಳು ಎಂದು ತಿಳಿದು ಬಂದಿದೆ.
ಆಸ್ಪತ್ರೆಯ ಆಡಳಿತ ಮಂಡಳಿಯು ಮಲಪ್ಪುರಂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಈ ವಿಚಾರವನ್ನು ತಿಳಿಸಿದೆ. ಇದಾದ ಬಳಿಕ ಪೊಲೀಸರಿಗೂ ಸಮಿತಿ ಮಾಹಿತಿ ನೀಡಿದೆ. ಹುಡುಗಿ ನೀಡಿರುವ ದಾಖಲೆಗಳನ್ನು ಆಧರಿಸಿ ಆಕೆಯ 21 ವರ್ಷದ ಪ್ರಿಯತಮನನ್ನು ಪೊಲೀಸರು ಬಂಧಿಸಿದ್ದಾರೆ. ಯುವಕನ ವಿರುದ್ಧ ಪೋಸ್ಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮಗು ಅಳುತ್ತಿರುವ ಶಬ್ದ ಕೇಳಿದ ಹಿನ್ನೆಲೆಯಲ್ಲಿ ಯುವತಿಯ ಪೋಷಕರಿಗೆ ಅಕ್ಟೋಬರ್ 22ರಂದು ಈ ವಿಚಾರ ಗೊತ್ತಾಗಿದೆ. ದೃಷ್ಟಿಹೀನ ತಾಯಿ ಹಾಗೂ ರಾತ್ರಿ ಪಾಳಿಯಲ್ಲಿ ವಾಚ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ತಂದೆಯಿಂದ ಗರ್ಭಿಣಿ ವಿಚಾರವನ್ನು ಮುಚ್ಚಿಟ್ಟಿದ್ದಳು ಎನ್ನಲಾಗಿದೆ.
ಅಪ್ರಾಪ್ತೆ ಹಾಗೂ 21 ವರ್ಷದ ಯುವಕ ಪ್ರೀತಿಸುತ್ತಿರುವ ವಿಚಾರ ಮನೆಯವರಿಗೂ ತಿಳಿದಿತ್ತು. ಹೀಗಾಗಿ ಆಕೆಗೆ 18 ತುಂಬಿದ ಬಳಿಕ ಮದುವೆ ಮಾಡಲು ಎರಡೂ ಕುಟುಂಬದವರೂ ನಿರ್ಧರಿಸಿದ್ದರು ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ. ತನಿಖೆಯ ಭಾಗವಾಗಿ ಪೊಲೀಸರು ಇದೀಗ ಮಗುವಿನ ಡಿಎನ್ಎ ಪರೀಕ್ಷೆಗೆ ಮುಂದಾಗಿದ್ದಾರೆ.