14 ವರ್ಷದ ಬಾಲಕಿಯ ಮೇಲೆ ಇಬ್ಬರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆಯು ಕಾನ್ಪುರದಲ್ಲಿ ನಡೆದಿದೆ. ಅಪ್ರಾಪ್ತೆಯು ಮನೆಯ ಹೊರಗೆ ತಾನು ಸಾಕಿದ್ದ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದ ವೇಳೆಯಲ್ಲಿ ಇಬ್ಬರು ಕಾಮುಕರು ಆಕೆಯನ್ನು ಅಪಹರಿಸಿ ಬಳಿಕ ಅತ್ಯಾಚಾರಗೈದಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸಹೋದರರಾದ ಚುಟ್ಕನ್ ಹಾಗೂ ಬಡ್ಕನ್ ಎಂಬವರು ಈ ಕೃತ್ಯ ಎಸಗಿದ್ದಾರೆ. ಗಂಟೆ ಕಳೆದರೂ ಬಾಲಕಿ ಪತ್ತೆ ಸಿಗದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಸಂಪೂರ್ಣ ಗ್ರಾಮವೇ ಬಾಲಕಿಗಾಗಿ ಹುಡುಕಾಟ ನಡೆಸಿದ್ದರೂ ಸಹ ಯಾವುದೇ ಸುಳಿವು ಪತ್ತೆ ಆಗಿರಲಿಲ್ಲ.
ಪೊದೆಯೊಂದರಲ್ಲಿ ಬಾಲಕಿಯನ್ನು ಹಗ್ಗದಿಂದ ಕಟ್ಟಿ ಹಾಕಲಾಗಿದ್ದು, ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಳೆ ಮತ್ತು ಆಕೆಯ ಬಾಯಿಗೆ ಬಟ್ಟೆಯನ್ನು ಕಟ್ಟಲಾಗಿದೆ ಎಂದು ಸಂಬಂಧಿಕರೊಬ್ಬರಿಗೆ ಮಾಹಿತಿ ಸಿಕ್ಕಿದೆ.
ಬಳಿಕ ಬಾಲಕಿಯ ಕುಟುಂಬಸ್ಥರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದು ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕಳುಹಿಸಿದ್ದಾರೆ. ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು ಮತ್ತೊಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.