ಬೆಂಗಳೂರು: ಕೋವಿಡ್-19 ಮತ್ತೆ ಹೆಚ್ಚಾಗಿದ್ದು, ಸೋಂಕು ತಗುಲಿದ ಅನೇಕ ಮಂದಿ ಮನೆಯಲ್ಲೇ ಕ್ವಾರಂಟೈನ್ ಆಗುತ್ತಿದ್ದಾರೆ. ಇವರಿಗೆಂದೇ ಬಿಬಿಎಂಪಿ ಹೋಮ್ ಐಸೋಲೇಷನ್ ಕಿಟ್ ನೀಡುತ್ತಿದೆ. ಆದರೀಗ ಚಾಲ್ತಿಯಲ್ಲಿರದ ಅಥವಾ ಹಳೆಯದಾದ ಕಿಟ್ ನೀಡಿರುವ ಆರೋಪ ಬಿಬಿಎಂಪಿ ವಿರುದ್ಧ ಕೇಳಿಬಂದಿದೆ.
ಕೋವಿಡ್-19 ಚಿಕಿತ್ಸಾ ಪ್ರೋಟೋಕಾಲ್‌ನಿಂದ ಐವರ್ಮೆಕ್ಟಿನ್ ಮತ್ತು ಡಾಕ್ಸಿಸೈಕ್ಲಿನ್ ಅನ್ನು ತೆಗೆದುಹಾಕಿ ಆರು ತಿಂಗಳುಗಳು ಕಳೆದಿವೆ. ಆದರೆ, ಬಿಬಿಎಂಪಿಯು ಈ ಔಷಧಿಗಳನ್ನು ಹೋಂ ಐಸೋಲೇಷನ್ ಆಗಿರುವ ರೋಗಿಗಳಿಗೆ ನೀಡಿವೆ ಎಂಬ ಆರೋಪ ಕೇಳಿಬಂದಿದೆ. ಅವರಲ್ಲಿ ಬೊಮ್ಮನಹಳ್ಳಿ ವಲಯದ ನಿವಾಸಿ 43 ವರ್ಷದ ಫರೀದ್ (ಹೆಸರು ಬದಲಾಯಿಸಲಾಗಿದೆ), ಡಿಸೆಂಬರ್ 25 ರಂದು ಸೌಮ್ಯ ಜ್ವರ (100 ಎಫ್) ಕಾಣಿಸಿಕೊಂಡಿದೆ. ಇದರಲ್ಲಿ ದೇಹದ ನೋವು, ತೀವ್ರ ಮೈಗ್ರೇನ್ ಮತ್ತು ತೀವ್ರ ಮೂಗು ಕಟ್ಟುವಿಕೆಯನ್ನೂ ಅವರು ಅನುಭವಿಸಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅವರಿಗೆ ಹೋಮ್-ಐಸೋಲೇಶನ್ ಕಿಟ್ ಅನ್ನು ವಿತರಿಸಿದೆ. ಕಿಟ್‌ನಲ್ಲಿ ಸ್ಯಾನಿಟೈಸರ್ (100 ಮಿಲಿ), ಟ್ರಿಪಲ್ ಲೇಯರ್ ಮಾಸ್ಕ್, ವಿಟಮಿನ್ ಸಿ (500 ಮಿಗ್ರಾಂ), ಜಿಂಕ್ ಮಾತ್ರೆಗಳು (50 ಮಿಗ್ರಾಂ), ಆರು ದಿನಗಳ ಪ್ಯಾರಾಸಿಟಮಾಲ್ ಮತ್ತು ಮೂರು ದಿನಗಳ ಐವರ್‌ಮೆಕ್ಟಿನ್ ಅನ್ನು ಕೂಡ ನೀಡಲಾಗಿದೆ.
ಪ್ರತ್ಯೇಕವಾಗಿ ಖಾಸಗಿ ಸಮಾಲೋಚನೆ ನಡೆಸಿದ ಇವರಿಗೆ ಐವರ್‌ಮೆಕ್ಟಿನ್ ಔಷಧಿಗಳನ್ನು ಸೇವಿಸದಂತೆ ಸಲಹೆ ನೀಡಿದ್ದಾರೆ. ಕ್ಲಿನಿಕಲ್ ಟ್ರೀಟ್ಮೆಂಟ್ ಕಮಿಟಿಯ ಸದಸ್ಯರ ಪ್ರಕಾರ, ಹೋಂ ಐಸೋಲೇಟ್ ಆಗುವವರಿಗೆ ಕಿಟ್ ನಲ್ಲಿ ಪ್ಯಾರಸಿಟಮಾಲ್, ವಿಟಮಿನ್ ಮಾತ್ರೆಗಳು ಮತ್ತು ಸತುವನ್ನು ಒಳಗೊಂಡಿರಬೇಕು. ಕೇಂದ್ರ ಆರೋಗ್ಯ ಸಚಿವಾಲಯವು 2021 ರ ಜೂನ್ 7 ರಂದು ಐವರ್ಮೆಕ್ಟಿನ್ ಮತ್ತು ಡಾಕ್ಸಿಸೈಕ್ಲಿನ್ ಎರಡನ್ನೂ ಕೂಡ ಕ್ಲಿನಿಕಲ್ ಚಿಕಿತ್ಸಾ ಪಟ್ಟಿಯಿಂದ ತೆಗೆದುಹಾಕಿದೆ.
ವಾಸ್ತವವಾಗಿ, ತಜ್ಞರು ಯಾವ ಕಿಟ್ ಕೊಡಬೇಕು ಅನ್ನುವ ಬಗ್ಗೆ ಹೇಳುತ್ತಿಲ್ಲ. ನವೀಕರಿಸಿದ ಕಿಟ್‌ಗಳನ್ನು ನೀಡಲು ಯೋಜಿಸುತ್ತಿದ್ದೇವೆ, ಆದರೆ ಇನ್ನೂ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಎ.ಎಸ್. ಬಾಲಸುಂದರ್ ಹೇಳಿದ್ದಾರೆ.
ಡಾಕ್ಸಿಸೈಕ್ಲಿನ್ ಔಷಧಿಯು ತೀವ್ರ ಗ್ಯಾಸ್ಟ್ರಿಕ್ ಸಮಸ್ಯೆಗಳು ಮತ್ತು ವಾಂತಿಗೆ ಕಾರಣವಾಗುತ್ತದೆ. ಯಕೃತ್ತಿನ ಕಾರ್ಯಗಳಿಗೆ ಸಹ ಇವು ಪರಿಣಾಮ ಬೀರುತ್ತವೆ ಎಂದು ಸಾಂಕ್ರಾಮಿಕ ರೋಗ ತಜ್ಞ ಡಾ. ರಘು ಜೆ ಮಾಹಿತಿ ನೀಡಿದ್ದಾರೆ.