ಚೆನ್ನೈ: ಐದು ದಿನದ ಹಸುಗೂಸನ್ನು ಮಾರಾಟ ಮಾಡಲು ಹೊರಟ ತಾಯಿ ಸೇರಿ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿರುವ ಘಟನೆ ಚೆನ್ನೈ ನಗರದ ಹೊರವಲಯದಲ್ಲಿರುವ ಸೆಲೈಯೂರ್ ನ ಮಪ್ಪೆಡು ಎಂಬಲ್ಲಿ ನಡೆದಿದೆ.
ಐದು ಸಾವಿರ ರೂ.ಗೆ ಗಂಡು ಮಗುವನ್ನು ಮಾರಾಟ ಮಾಡಲು ಹೊರಟ ತಾಯಿ ಸ್ಯಾನಿಟರಿ ವರ್ಕರ್. ತಂದೆಯದು ದಿನಗೂಲಿ ಕೆಲಸ. ಈಗಾಗಲೇ ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಈ ಮಗು ಮೂರನೇಯದು. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ತಾಯಿಯು ಮಗುವನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಈಗಾಗಲೇ ಎರಡು ಮಕ್ಕಳಿದ್ದಾರೆ. ಇನ್ನೊಂದು ಮಗುವನ್ನು ನೋಡಿಕೊಳ್ಳಲು ನಮಗೆ ಹೊರೆಯಾಗಬಹುದೆಂಬ ಕಾರಣ ನನ್ನ ಸಹೋದ್ಯೋಗಿಗೆ ಕೊಡಲು ನಿರ್ಧರಿಸಿದೆ ಎಂದು ಪೊಲೀಸರಿಗೆ ತಾಯಿಯು ತಿಳಿಸಿದ್ದಾರೆ. ಇನ್ನು ಮಗುವನ್ನು ತೆಗೆದುಕೊಂಡ ಮಹಿಳೆಯ ಸಹೋದರನಿಗೆ ಮದುವೆಯಾಗಿ 10 ವರ್ಷವಾದರೂ ಮಕ್ಕಳಿಲ್ಲದ ಕಾರಣ ಆತನಿಗಾಗಿ ಮಗು ಖರೀದಿಸಿದೆ ಎಂದು ಹೇಳಿದ್ದಾರೆ.
ತಾಯಿಯ ಸಂಬಂಧಿಕರು ಶಿಶು ನಾಪತ್ತೆಯಾಗಿರುವುದನ್ನು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿ ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.