ಸಲೂನ್‌ನಲ್ಲಿ ಹೇರ್ ವಾಶ್ ಮಾಡಿಸಿಕೊಂಡಿದ್ದೇ ಹೈದ್ರಾಬಾದ್‌ನ 50 ವರ್ಷದ ಮಹಿಳೆಯೊಬ್ಬರಿಗೆ ಮಾರಣಾಂತಿಕವಾಗಿ ಪರಿಣಮಿಸಿದೆ. ಆಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ “ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್” ಎಂದು ಕರೆಯುತ್ತಾರೆ. ಕೂದಲನ್ನು ವಾಶ್ ಮಾಡುವ ಸಂದರ್ಭದಲ್ಲಿ ಮಹಿಳೆಗೆ ಸ್ಟ್ರೋಕ್ ಹೊಡೆದಿದೆ. ಕೂದಲು ತೊಳೆಯಲು ಕುತ್ತಿಗೆಯನ್ನು ಹಿಂದಕ್ಕೆ ಬಾಗಿಸಿದಾಗ ಮೆದುಳಿಗೆ ರಕ್ತವನ್ನು ಪೂರೈಸುವ ಪ್ರಮುಖ ಜಾಗ ಒತ್ತಲ್ಪಟ್ಟಿದೆ. ಇದರಿಂದಾಗಿಯೇ ಆಕೆ ಪಾರ್ಶ್ವವಾಯುವಿಗೆ ತುತ್ತಾಗಿದ್ದಾಳೆ.
“ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್” ಮೊದಲ ಬಾರಿಗೆ 1993 ರಲ್ಲಿ ಅಮೆರಿಕದಲ್ಲಿ ವರದಿಯಾಗಿತ್ತು. ಕುತ್ತಿಗೆ ಮಸಾಜ್‌ಗಾಗಿ ಸಲೂನ್‌ಗಳಿಗೆ ಭೇಟಿ ನೀಡುವ ಪುರುಷರಲ್ಲಿ ಈ ಸಮಸ್ಯೆ ಸಾಮಾನ್ಯವಾಗಿದೆ. ಸಿಕಂದರಾಬಾದ್‌ನ ಕಿಮ್ಸ್ ಸಲಹೆಗಾರ ನರರೋಗ ತಜ್ಞ ಡಾ.ಪ್ರವೀಣ್ ಕುಮಾರ್ ಯಾದಾ ಈ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಇಂತಹ ಅನೇಕ ಪ್ರಕರಣಗಳಲ್ಲಿ ಅವರು ಚಿಕಿತ್ಸೆ ನೀಡಿದ್ದಾರಂತೆ. ಮಸಾಜ್ ಮಾಡುವವರು ಕುತ್ತಿಗೆ ಮತ್ತು ತಲೆಯನ್ನು ಗಟ್ಟಿಯಾಗಿ ಒತ್ತಿದಾಗ, ಕೆಲವೊಮ್ಮೆ ಕುತ್ತಿಗೆಯನ್ನು ತಿರುಚಿದಾಗ ಈ ರೀತಿ ಸಮಸ್ಯೆಯಾಗುತ್ತದೆ.
ಚಟ್ ಎಂಬ ಬಿರುಕು ಬಿಟ್ಟಂತಹ ಶಬ್ಧ ಕೇಳಿಸುತ್ತದೆ. ಕೋಮಲವಾದ ಅತ್ಯಂತ ಸೂಕ್ಷ್ಮ ಜಾಗಕ್ಕೆ ಪೆಟ್ಟು ಬೀಳುವುದರಿಂದ ಅವರು ಸ್ಟ್ರೋಕ್‌ಗೆ ತುತ್ತಾಗುತ್ತಾರೆ. ಬ್ಯೂಟಿ ಪಾರ್ಲರ್ ಸ್ಟ್ರೋಕ್‌ನ ಸಾಮಾನ್ಯ ಲಕ್ಷಣಗಳೆಂದರೆ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿ. ಹೈದ್ರಾಬಾದ್‌ನ ಮಹಿಳೆಗೂ ಇಂಥದ್ದೇ ಅನುಭವವಾಗಿದೆ. ಆರಂಭದಲ್ಲಿ ಆಕೆ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಅನ್ನು ಸಂಪರ್ಕಿಸಿದ್ದಾರೆ. ಆದರೆ ಯಾವುದೇ ಗ್ಯಾಸ್ಟ್ರಿಕ್ ಸಮಸ್ಯೆ ಇಲ್ಲವೆಂದು ಸ್ಪಷ್ಟಪಡಿಸಿದ್ರು. ಆಕೆಯಲ್ಲಿ ಒಂದು ರೀತಿಯ ಕ್ಷೀಣತೆ ಇದ್ದಿದ್ದರಿಂದ ಕೂಡಲೇ ನರತಜ್ಞರನ್ನು ಭೇಟಿ ಮಾಡುವಂತೆ ಸೂಚಿಸಲಾಯ್ತು. ಬ್ಯೂಟಿ ಪಾರ್ಲರ್ ಸ್ಟ್ರೋಕ್ ಸಿಂಡ್ರೋಮ್‌ನಿಂದ ಬಳಲುತ್ತಿದ್ದ ಮಹಿಳೆ ಆಸ್ಪತ್ರೆ ತಲುಪಿದಾಗ ಆಕೆಯಲ್ಲಿ ಸಮಸ್ಯೆ ಕಾಣಿಸಿಕೊಂಡು 24 ಗಂಟೆಗಳೇ ಕಳೆದಿತ್ತು.
ಆಕೆ ಓರೆಯಾಗಿ ನಡೆಯುತ್ತಿದ್ಲು, ದುರ್ಬಲಳಾಗಿದ್ದಳು. ಹಾಗಾಗಿ ಪಾರ್ಶ್ವವಾಯು ಆಗಿರಬಹುದೆಂಬ ಶಂಕೆಯಿಂದ ವೈದ್ಯರು MRI ಮಾಡಿದ್ದಾರೆ. ನಿರೀಕ್ಷಿಸಿದಂತೆ ಆಕೆಗೆ ಸ್ಟ್ರೋಕ್ ಆಗಿರೋದು ವರದಿಯಲ್ಲಿ ದೃಢಪಟ್ಟಿದೆ. ಆಕೆಯ ಬಲ ಸೆರೆಬೆಲ್ಲಮ್ ಮತ್ತು ಪಿಐಸಿಎ ಎಂಬ ಕತ್ತಿನ ಹಿಂಭಾಗದ ಪ್ರಮುಖ ಅಪಧಮನಿಯಲ್ಲಿ ಹೆಪ್ಪುಗಟ್ಟುವಿಕೆ ಕಂಡುಬಂದಿದೆ. ಕೂಡಲೇ ಆಕೆಗೆ ಚಿಕಿತ್ಸೆ ಆರಂಭಿಸಲಾಯ್ತು. ಸಲೂನ್‌ಗೆ ಭೇಟಿ ನೀಡಿದಾಗ ಆಕೆ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ. ಆದಾಗ್ಯೂ ‘ಟ್ರಾನ್ಸಿಯೆಂಟ್ ಇಸ್ಕೆಮಿಕ್ ಅಟ್ಯಾಕ್’ ಎಂಬ ಸೌಮ್ಯವಾದ ಸ್ಟ್ರೋಕ್‌ಗಳನ್ನು ಅನುಭವಿಸಿದ್ದರಿಂದ ಪ್ರಾಣಕ್ಕೆ ಅಪಾಯವಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.