ಸಾಮಾನ್ಯವಾಗಿ ಸರ್ಕಾರಿ ಹುದ್ದೆಗಳ ನೇಮಕಾತಿ ವೇಳೆ ಅಕ್ರಮ ನಡೆಯುವುದರ ಕುರಿತು ಕೇಳಿರುತ್ತೇವೆ. ಇದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ ಪಿಎಸ್ಐ ನೇಮಕಾತಿ ಅಕ್ರಮ ಸೇರಿದಂತೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಖಾಸಗಿ ಕಂಪನಿ ಉದ್ಯೋಗಿಗಳ ನೇಮಕಾತಿಯಲ್ಲೂ ಅಕ್ರಮ ನಡೆಯುತ್ತದೆ ಅಂದರೆ ನೀವು ನಂಬಲೇಬೇಕು.
ಹೌದು, ಅಂತದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮತ್ತೊಂದು ಶಾಕಿಂಗ್ ಸಂಗತಿ ಎಂದರೆ ಸಾಫ್ಟ್ ವೇರ್ ಉದ್ಯೋಗಿ ನೇಮಕಾತಿಯಲ್ಲಿ ಈ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಐಟಿ ಕಂಪನಿಯೊಂದು ಸಾಫ್ಟ್ ವೇರ್ ಡೆವಲಪರ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲು ಮುಂದಾಗಿತ್ತು.
ಜೂನ್ 14ರಂದು ಕಿರಣ್ ಮತ್ತು ಪ್ರಿಯಾಂಕಾ ಎಂಬವರು ಈ ಕಂಪನಿಗೆ ಉದ್ಯೋಗಿಗಳಾಗಿ ಸೇರಿಕೊಂಡಿದ್ದರು. ಆದರೆ ಇವರುಗಳು ಕಂಪನಿ ನೀಡಿದ ಯಾವುದೇ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಅನುಮಾನಗೊಂಡು ಸಂದರ್ಶನದಲ್ಲಿ ಪಡೆದಿದ್ದ ಅಂಕ ಹಾಗೂ ಇವರು ಕೆಲಸದಲ್ಲಿ ತೋರಿಸುತ್ತಿರುವ ಕಾರ್ಯಕ್ಷಮತೆ ಒಂದಕ್ಕೊಂದು ತಾಳಮೇಳವೇ ಇರಲಿಲ್ಲ.
ಹೀಗಾಗಿ ಇಬ್ಬರನ್ನು ಕರೆದು ಕೂಲಂಕುಶವಾಗಿ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಹೈದರಾಬಾದ್ ಮೂಲದ ಆಕ್ಟಿವಿಎಸ್ ಜೆ ಆರ್ ಏಜೆನ್ಸಿ ಸಹಾಯ ಪಡೆದು ಇವರುಗಳು ಹೆಚ್ಚಿನ ಅಂಕ ಪಡೆದಿರುವುದು ಖಚಿತವಾಗಿದೆ. ಅಲ್ಲದೆ ಇದಕ್ಕಾಗಿ ಅವರಿಗೆ 3 ಲಕ್ಷ ರೂಪಾಯಿ ನೀಡಿರುವುದಾಗಿ ಈ ಇಬ್ಬರು ಉದ್ಯೋಗಿಗಳು ಒಪ್ಪಿಕೊಂಡಿದ್ದಾರೆ.
ಇದೀಗ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪನಿಯ ಅಧಿಕಾರಿ, ಆಕ್ಟಿವಿಯಸ್ ಜೆ ಆರ್ ಏಜೆನ್ಸಿಯ ನಾಸಿರುದ್ದೀನ್ ಹಾಗೂ ಸುಳ್ಳು ಮಾಹಿತಿ ನೀಡಿ ಉದ್ಯೋಗ ಪಡೆದ ಕಿರಣ್ ಕುಮಾರ್ ಹಾಗೂ ಪ್ರಿಯಾಂಕಾ ವಿರುದ್ಧ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಆರೋಪಿಗಳ ವಿರುದ್ಧ ಈಗ ಎಫ್ಐಆರ್. ದಾಖಲಾಗಿದೆ.