ಉತ್ತರ ಪ್ರದೇಶದಲ್ಲಿ ಏಳು ವರ್ಷದ ಪುಟ್ಟ ಬಾಲಕಿಯೊಬ್ಬಳು 18 ಗಂಟೆಗಳ ಕಾಲ ಶಾಲೆಯಲ್ಲಿ ಒಬ್ಬಂಟಿಯಾಗಿದ್ದ ಘಟನೆ ನಡೆದಿದೆ. ಶಾಲಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಶಾಲೆಯ ಅವಧಿ ಮುಗಿಯುತ್ತಿದ್ದಂತೆ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮನೆಗೆ ತೆರಳಿದ್ದಾರೆ.
ಕೊಠಡಿಯಲ್ಲಿ ಯಾರಾದರೂ ಇದ್ದಾರೆಯೇ ಎಂಬುದನ್ನೂ ಪರಿಶೀಲಿಸದೆ ಸಿಬ್ಬಂದಿ ಲಾಕ್ ಮಾಡಿಕೊಂಡು ಮನೆಗೆ ವಾಪಸ್ಸಾಗಿದ್ದಾರೆ. 7 ವರ್ಷದ ಬಾಲಕಿ ಒಬ್ಬಂಟಿಯಾಗಿ ಶಾಲೆಯ ಕೋಣೆಯಲ್ಲೇ ಉಳಿದಿದ್ದಾಳೆ. ಬುಧವಾರ ಬೆಳಗ್ಗೆ ತರಗತಿ ಆರಂಭವಾದಾಗ ಈ ಘಟನೆ ಬೆಳಕಿಗೆ ಬಂದಿದೆ.
ಗುನ್ನೌರ್ ತಾಹಸಿಲ್‌ನ ಧನರಿಯಲ್ಲಿರುವ ಪ್ರಾಥಮಿಕ ಶಾಲೆಯ 1 ನೇ ತರಗತಿ ವಿದ್ಯಾರ್ಥಿನಿ ಆಕೆ. ಮಂಗಳವಾರ ಶಾಲೆಗೆ ಬಂದಿದ್ದ ಬಾಲಕಿ ಕೋಣೆಯಲ್ಲೇ ಬಂಧಿಯಾಗಿದ್ದಳು. ಅದೃಷ್ಟವಶಾತ್ ಬಾಲಕಿಗೆ ಯಾವುದೇ ಅಪಾಯವಾಗಿಲ್ಲ, ಆಕೆ ಸುರಕ್ಷಿತವಾಗಿದ್ದಾಳೆ. ಮಂಗಳವಾರ ಶಾಲೆ ಮುಗಿದರೂ ಮಗು ಮನೆಗೆ ಬಾರದೆ ಇದ್ದಾಗ ಆಕೆಯ ಅಜ್ಜಿ ಹುಡುಕಿಕೊಂಡು ಸ್ಕೂಲ್‌ಗೆ ಬಂದಿದ್ದಾಳೆ. ಆದ್ರೆ ಎಲ್ಲರೂ ಮನೆಗೆ ತೆರಳಿದ್ದು, ಶಾಲೆಯಲ್ಲಿ ಯಾರೂ ಇಲ್ಲವೆಂದು ಸಿಬ್ಬಂದಿ ತಿಳಿಸಿದ್ರು.
ಮಗು ಎಲ್ಲಿಗೆ ಹೋಗಿದ್ದಾಳೆಂಬುದು ತಿಳಿಯದೇ ಪೋಷಕರು ಕಂಗಾಲಾಗಿದ್ದರು. ಗಾಬರಿಯಿಂದ ಮನೆಯವರು ಕಾಡಿನಲ್ಲೆಲ್ಲ ಹುಡುಕಾಡಿದ್ದಾರೆ. ಎಲ್ಲೂ ಆಕೆ ಸಿಕ್ಕಿರಲಿಲ್ಲ. ಬುಧವಾರ ಬೆಳಗ್ಗೆ 8 ಗಂಟೆಗೆ ಶಾಲೆಯ ಕೊಠಡಿಯ ಬೀಗ ತೆರೆದಾಗ ಮಗು ರಾತ್ರಿಯಿಡೀ ಒಂಟಿಯಾಗಿ ಅಲ್ಲೇ ಇದ್ದಳು ಅನ್ನೋದು ಬೆಳಕಿಗೆ ಬಂದಿದೆ. ನಿರ್ಲಕ್ಷ್ಯವೆಸಗಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸ್ಥಳೀಯ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.