ಬೆಂಗಳೂರು: ವಾಟರ್ ಪ್ಯೂರಿಫೈಯರ್ ದುರಸ್ತಿ ಮಾಡಲು ಮನೆಗೆ ಬಂದಿದ್ದ ವ್ಯಕ್ತಿ ವಿವಾಹಿತೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೂಡ್ಲು ನಿವಾಸಿಯಾಗಿರುವ 40 ವರ್ಷದ ಮಹಿಳೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ರವಿತೇಜ ಎಂಬುವನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪಾರ್ಟ್ಮೆಂಟ್ ವೊಂದರಲ್ಲಿ ಮಹಿಳೆ ವಾಸವಾಗಿದ್ದು ವಾಟರ್ ಪ್ಯೂರಿಫೈಯರ್ ಹಾಳಾಗಿದ್ದರಿಂದ ಪರಿಚಿತರೊಬ್ಬರಿಗೆ ಕರೆ ಮಾಡಿದ್ದಾರೆ. ಅವರು ಬೇರೆ ಕೆಲಸದಲ್ಲಿದ್ದ ಕಾರಣ ಬೇರೆ ಮೆಕಾನಿಕ್ ನಂಬರ್ ಕಳುಹಿಸಿದ್ದಾರೆ.
ಫೆಬ್ರವರಿ 1 ರಂದು ಮನೆಗೆ ಬಂದಿದ್ದ ರವಿತೇಜ ವಾಟರ್ ಪ್ಯೂರಿಫೈಯರ್ ರಿಪೇರಿ ಮಾಡಿಕೊಟ್ಟು ಹೋಗಿದ್ದಾನೆ. ಫೆಬ್ರವರಿ 2 ರಂದು ವಾಟರ್ ಪ್ಯೂರಿಫೈಯರ್ ಮತ್ತೆ ಹಾಳಾಗಿದ್ದರಿಂದ ಆತನಿಗೆ ಕರೆ ಮಾಡಲಾಗಿದೆ. ಈ ವೇಳೆ ಮನೆಗೆ ಬಂದ ಆತ ಅಶ್ಲೀಲವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಮಹಿಳೆ ಕೂಗಾಡಿದಾಗ ಪರಾರಿಯಾಗಿದ್ದಾನೆ.