ಅಲಿರಾಜ್ ಪುರ(ಮಧ್ಯಪ್ರದೇಶ): ಯುವಕರ ಗುಂಪೊಂದು ಯುವತಿಗೆ ಲೈಂಗಿಕ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆ ಅಲಿರಾಜಪುರ ಜಿಲ್ಲೆಯ ಬಲ್ಪುರ್ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ ಭಗೋರಿಯಾ ಉತ್ಸವದಲ್ಲಿ ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎಂದು ವರದಿಯಾಗಿದೆ.
ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಜಿಲ್ಲೆಗಳಲ್ಲಿ ಭಗೋರಿಯಾ ಅತಿದೊಡ್ಡ ಮತ್ತು ಪ್ರಸಿದ್ಧ ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ.
ಅಲ್ಲಿ ನಿಲ್ಲಿಸಿದ್ದ ವಾಹನದ ಹಿಂದೆ ಬಾಲಕಿ ಅಡಗಿಕೊಳ್ಳಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ನಡುವೆ ಆ ರಸ್ತೆ ಮೂಲಕ ಹೋಗುತ್ತಿದ್ದ ಗುಂಪಿನ ಯುವಕನೊಬ್ಬ ಬಾಲಕಿಯತ್ತ ಧಾವಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಸ್ವಲ್ಪ ಸಮಯದ ನಂತರ, ಮತ್ತೊಬ್ಬ ಯುವಕ ಗುಂಪಿನಲ್ಲಿದ್ದ ಹುಡುಗಿಯನ್ನು ಎಳೆದೊಯ್ದಿದ್ದಾನೆ. ನಂತರ ಗುಂಪಿನಲ್ಲಿದ್ದ ಬಹುತೇಕರು ಹುಡುಗಿಗೆ ಕಿರುಕುಳ ನೀಡಿದ್ದಾರೆ. ವರದಿಗಳ ಪ್ರಕಾರ, ಹುಡುಗಿ ಮತ್ತು ಯುವಕರು ನೆರೆಯ ಧಾರ್ ಜಿಲ್ಲೆಯ ಒಂದೇ ಹಳ್ಳಿಗೆ ಸೇರಿದವರಾಗಿದ್ದಾರೆ.
ಪೊಲೀಸರು ವಿಡಿಯೋ ವೈರಲ್ ಆಗುತ್ತಲೇ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅಲಿರಾಜ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ(ಎಸ್‌ಪಿ), ಮನೋಜ್ ಸಿಂಗ್ ತಿಳಿಸಿದ್ದಾರೆ.
ನಾವು ಕೆಲವು ಯುವಕರನ್ನು ಗುರುತಿಸಿದ್ದೇವೆ. ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.