ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಮಾಸಿದ ಸಮವಸ್ತ್ರ ಧರಿಸಿ ವಿದ್ಯಾರ್ಥಿನಿ ಶಾಲೆಗೆ ಬಂದಿದ್ದಾಳೆಂಬ ಕಾರಣಕ್ಕೆ ಶಿಕ್ಷಕನೊಬ್ಬ ಆಕೆಯ ಬಟ್ಟೆ ಬಿಚ್ಚಿಸಿ ವಾಶ್ ಮಾಡಿಸಿದ್ದೂ ಅಲ್ಲದೆ ಶಿಕ್ಷಣ ಇಲಾಖೆಯ ವಾಟ್ಸಾಪ್ ಗ್ರೂಪ್ ನಲ್ಲಿ ಸ್ವತಃ ಈ ವಿಡಿಯೋ ಹಂಚಿಕೊಂಡಿದ್ದಾನೆ. ಅಲ್ಲದೆ ತನ್ನನ್ನು ತಾನು ‘ಸ್ವಚ್ಛತಾ ಮಿತ್ರ’ ಎಂದು ಘೋಷಣೆ ಮಾಡಿಕೊಂಡಿದ್ದಾನೆ.
ಶಹದೋಲ್ ಜಿಲ್ಲೆಯ ಶಾಲೆಯಲ್ಲಿ ಈ ಘಟನೆ ನಡೆದಿದ್ದು, 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆದಿವಾಸಿ ಸಮುದಾಯದ ಹತ್ತು ವರ್ಷದ ಬಾಲಕಿ ಮಾಸಿದ ಸಮವಸ್ತ್ರ ಧರಿಸಿ ಶಾಲೆಗೆ ಬಂದಿದ್ದಳು ಎನ್ನಲಾಗಿದೆ. ಹೀಗಾಗಿ ಎಲ್ಲರೆದುರೇ ಆಕೆಯನ್ನು ಗದರಿದ ಶಿಕ್ಷಕ ಬಳಿಕ ಬಟ್ಟೆ ಬಿಚ್ಚಿಸಿ ಅರೆನಗ್ನ ಸ್ಥಿತಿಯಲ್ಲಿಯೇ ಆಕೆಯಿಂದ ವಾಶ್ ಮಾಡಿಸಿದ್ದಾನೆ.
ಬಟ್ಟೆ ಒಣಗುವವರೆಗೂ ಬಾಲಕಿ ಅರೆ ನಗ್ನ ಸ್ಥಿತಿಯಲ್ಲಿಯೇ ನಿಂತಿದ್ದಳು ಎನ್ನಲಾಗಿದ್ದು, ಇದರ ವಿಡಿಯೋವನ್ನು ಶಿಕ್ಷಣ ಇಲಾಖೆಯ ವಾಟ್ಸಾಪ್ ಗ್ರೂಪ್ ನಲ್ಲಿ ಶಿಕ್ಷಕ ತ್ರಿಪಾಠಿ ಹಂಚಿಕೊಂಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಲ್ಲರೂ ಶಿಕ್ಷಕನಿಗೆ ಛೀಮಾರಿ ಹಾಕಿದ್ದು, ಇದೀಗ ಶಿಕ್ಷಣ ಇಲಾಖೆ ಶಿಕ್ಷಕನನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ.