ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಕಾರಣವಾದ ಕೆಮ್ಮಿನ ಸಿರಪ್ ಅನ್ನು ಭಾರತದಲ್ಲಿ ಸ್ಥಳೀಯವಾಗಿ ಮಾರಾಟ ಮಾಡುತ್ತಿಲ್ಲ ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ಜನರಿಗೆ ಭರವಸೆ ನೀಡಿದೆ.
ಆದರೆ 2011ರಲ್ಲೇ ಬಿಹಾರದಲ್ಲಿ ಕಪ್ಪು ಪಟ್ಟಿಗೆ ಸೇರಿದ ಈ ಕಂಪನಿ, ಮೇಡನ್ ಫಾರ್ಮಾಸ್ಯುಟಿಕಲ್ಸ್ ಪದೇ ಪದೇ ಇಂತಹ ತಪ್ಪುಗಳನ್ನು ಮಾಡುತ್ತಿದೆ.
ಗ್ಯಾಂಬಿಯಾದಲ್ಲಿ ಮಕ್ಕಳ ಸಾವಿಗೆ ಕಾರಣವಾದ ಡೈಥೈಲಿನ್ ಗ್ಲೈಕಾಲ್ (DEG) ಮತ್ತು ಎಥಿಲೀನ್ ಗ್ಲೈಕೋಲ್, 2020ರ ಜನವರಿಯಲ್ಲಿ ಜಮ್ಮುವಿನಲ್ಲಿ ಮಕ್ಕಳಿಗೆ ಮಾರಕವಾಗಿದೆ. ಹಿಮಾಚಲ ಪ್ರದೇಶ ಮೂಲದ M/s ಡಿಜಿಟಲ್ ವಿಷನ್ ಎಂಬ ಬೇರೆ ಕಂಪನಿಯು ತಯಾರಿಸಿದ ಕೆಮ್ಮಿನ ಸಿರಪ್‌ನಲ್ಲಿ ಈ ವಿಷಕಾರಿ ಅಂಶ ಪತ್ತೆಯಾಗಿದೆ.
ಡ್ರಗ್ಸ್ ಅಂಡ್ ಕಾಸ್ಮೆಟಿಕ್ಸ್ ಆಕ್ಟ್ 1940ರ ಪ್ರಕಾರ, ಸಾವಿಗೆ ಕಾರಣವಾಗುವ ನಕಲಿ ಔಷಧಗಳ ತಯಾರಿಕೆ ಅಥವಾ ವ್ಯಾಪಾರಕ್ಕಾಗಿ 10 ವರ್ಷದಿಂದ ಜೀವಾವಧಿಯವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. 10 ಲಕ್ಷ ರೂಪಾಯಿ ದಂಡವನ್ನು ಹಾಕಬಹುದು. ಅಥವಾ ಔಷಧದ ಮೌಲ್ಯದ ಮೂರು ಪಟ್ಟು ದಂಡವನ್ನು ವಶಪಡಿಸಿಕೊಳ್ಳಬಹುದು. ಇಷ್ಟೆಲ್ಲಾ ದುರಂತಗಳಿಗೆ ಕಾರಣವಾದರೂ ಯಾರಿಗೂ ದಂಡ ವಿಧಿಸಿಲ್ಲ. ಎಲ್ಲಾ ಆರೋಪಿಗಳು ಜಾಮೀನಿನ ಮೇಲೆ ಹೊರಗಿದ್ದಾರೆ.
ಮೇಡನ್ ಫಾರ್ಮಾಸ್ಯುಟಿಕಲ್ಸ್‌ನಂತೆಯೇ, ಡಿಜಿಟಲ್ ವಿಷನ್ ಕೂಡ 2014 ಮತ್ತು 2019ರ ನಡುವೆ ಏಳು ಬಾರಿ ಪ್ರಮಾಣಿತ ಗುಣಮಟ್ಟ ಹೊಂದಿರದ ಔಷಧಗಳೊಂದಿಗೆ ಸಿಕ್ಕಿಬಿದ್ದಿದೆ. 2014 ರಲ್ಲಿ, ಮೇಡನ್ ಫಾರ್ಮಾಸ್ಯುಟಿಕಲ್ಸ್ ಅನ್ನು ಗುಣಮಟ್ಟದ ಸಮಸ್ಯೆಗಳಿಗಾಗಿ ವಿಯೆಟ್ನಾಂನಲ್ಲಿ ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಒಟ್ಟು 39 ಭಾರತೀಯ ಔಷಧ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿತ್ತು.
2015ರಲ್ಲಿ ಮೇಡನ್ ಫಾರ್ಮಾಸುಟಿಕಲ್ಸ್ ಉತ್ಪನ್ನವು ಕಳಪೆಯಾಗಿದೆ ಅನ್ನೋದು ಗುಜರಾತ್‌ನಲ್ಲಿ ಪತ್ತೆಯಾಗಿತ್ತು. 2017ರಲ್ಲಿ ಕಂಪನಿಗೆ ಕೇರಳದಲ್ಲಿ ದಂಡ ವಿಧಿಸಲಾಗಿತ್ತು. 2021 ಮತ್ತು 2022 ರಲ್ಲಿ ಕನಿಷ್ಠ ಐದು ಬಾರಿ ಅದರ ಉತ್ಪನ್ನಗಳು ಕಳಪೆಯಾಗಿರೋದು ದೃಢಪಟ್ಟಿದೆ.
ಆದರೂ ಈ ಕಂಪನಿ ಔಷಧಿಗಳ ಸರಬರಾಜು ಮುಂದುವರಿಸಿದೆ. ಕೇರಳದಲ್ಲಿ 1990ರಲ್ಲಿ ಸ್ಥಾಪನೆಯಾದ ಮೇಡನ್ ಫಾರ್ಮಾಸ್ಯುಟಿಕಲ್ಸ್, ಹರಿಯಾಣದ ಕುಂಡ್ಲಿ, ಪಾಣಿಪತ್ ಮತ್ತು ಹಿಮಾಚಲ ಪ್ರದೇಶದ ಸೋಲನ್‌ನಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ಇದರ ಕಾರ್ಪೊರೇಟ್ ಕಚೇರಿ ದೆಹಲಿಯ ಪಿತಾಂಪುರದಲ್ಲಿದೆ. 2020ರಲ್ಲಿ ಜಮ್ಮುವಿನಲ್ಲಿ ಸಾವನ್ನಪ್ಪಿದ 12 ಮಕ್ಕಳನ್ನು ಹೊರತುಪಡಿಸಿ, 1998 ರಲ್ಲಿ ದೆಹಲಿಯಲ್ಲಿ 33 ಸಾವುಗಳು, 1986 ರಲ್ಲಿ ಮುಂಬೈನಲ್ಲಿ 14 ಸಾವುಗಳು ಮತ್ತು 1973 ರಲ್ಲಿ ಚೆನ್ನೈನಲ್ಲಿ 14 ಸಾವುಗಳು ಸಂಭವಿಸಿವೆ. ಆದಾಗ್ಯೂ, CDSCO ಇಂತಹ ಕಂಪನಿಗಳ ವಿರುದ್ಧ ಮೃದು ಧೋರಣೆ ತಳೆದಿರುವುದು ಅನುಮಾನ ಮೂಡಿಸಿದೆ.