ಭರತ್ ಪುರ: ವರದಕ್ಷಿಣೆ ನೀಡದ ಕಾರಣ ಪತ್ನಿಯ ಮೇಲೆ ಪತಿ ಮತ್ತು ಆತನ ಸಂಬಂಧಿಕರು ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿದ ಆಘಾತಕಾರಿ ಘಟನೆ ರಾಜಸ್ಥಾನದ ಭರತ್ ಪುರದಲ್ಲಿ ನಡೆದಿದೆ.
ಈ ಬಗ್ಗೆ ಪತ್ನಿಯು ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದು, 1.5 ಲಕ್ಷ ರೂ. ವರದಕ್ಷಿಣೆ ಹಣ ನೀಡದ ಕಾರಣ ನನ್ನ ಮೇಲೆ ಪತಿ ಮತ್ತು ಆತನ ಇಬ್ಬರು ಸಂಬಂಧಿಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಚಿತ್ರೀಕರಿಸಿದ ವಿಡಿಯೋವನ್ನು ಯೂಟ್ಯೂಬಿನಲ್ಲಿ ಅಪ್ ಲೋಡ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
2019 ರಲ್ಲಿ ಹರಿಯಾಣದಲ್ಲಿ ಮದುವೆಯಾಗಿ ಬಂದ ನಂತರ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ತಾಯಿ ಮನೆಗೆ ಬಂದಿದ್ದೆ. ಆದರೆ ಪುನಃ ಪತಿ ಬಂದು ನನ್ನನ್ನು ಕರೆದುಕೊಂಡು ಹೋಗಿ ಬಲಾತ್ಕಾರ ಮಾಡಿದ್ದಾರೆ ಎಂದು ಸಂತ್ರಸ್ತೆಯು ನಡೆದ ಘಟನೆ ಬಗ್ಗೆ ತಿಳಿಸಿದ್ದಾರೆ.
ನನ್ನ ಅತ್ತೆಯಂದಿರು ವರದಕ್ಷಿಣೆ ಕಾರಣಕ್ಕೆ ಕಿರುಕುಳ ನೀಡುತ್ತಿದ್ದರು. ವರದಕ್ಷಿಣೆ ನೀಡದ ಕಾರಣ ನನ್ನ ಪತಿ ಈ ನೀಚ ಕೃತ್ಯ ಎಸಗಿದ್ದಾನೆ. ಅದನ್ನು ಯೂಟ್ಯೂಬ್ ನಲ್ಲಿ ಅಪ್ ಲೊಡ್ ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ. ಆದರೆ ವಿಡಿಯೋ ಬಗ್ಗೆ ಇನ್ನೂ ಮಾಹಿತಿ ತಿಳಿದಿಲ್ಲ ಎಂದು ಭರತ್ಪುರದ ಕಮಾನ್ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ದೌಲತ್ ಸಾಹು ಹೇಳಿದ್ದಾರೆ.