ಮೊಂಡುವಾದವನ್ನು ಮಾಡುವ ಪತ್ನಿಯಂದಿರ ಅಶಿಸ್ತಿನ ನಡವಳಿಕೆಯನ್ನು ಹತೋಟಿಗೆ ತರಲು ಪತಿಯಂದಿರು ಹೊಡೆಯಬೇಕು ಎಂದು ಹೇಳಿದ ಮಲೇಷಿಯಾದ ಮಹಿಳಾ ಸಚಿವೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧವನ್ನು ಎದುರಿಸುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ತಮ್ಮ ವಿವಾದಿತ ಹೇಳಿಕೆಯ ವಿಡಿಯೋವನ್ನು ಕುಟುಂಬ ಮತ್ತು ಸಮುದಾಯ ಅಭಿವೃದ್ಧಿ ಉಪಸಚಿವೆ ಸಿತಿ ಜೈಲಾ ಮೊಹಮ್ಮದ್ ಯುಸೂಫ್ ಪೋಸ್ಟ್ ಮಾಡಿದ್ದರು. ತಾಯಿಯ ಸಲಹೆಗಳು ಎಂಬ ಶೀರ್ಷಿಕೆಯ ವಿಡಿಯೋದಲ್ಲಿ ಜೈಲಾ ಮೊಂಡುತನದ ಹೆಂಡತಿಯರಿಗೆ ಥಳಿಸುವಂತೆ ಗಂಡಂದಿರಿಗೆ ಸಲಹೆಯನ್ನು ನೀಡಿದ್ದಾರೆ.
ವಿಡಿಯೋದಲ್ಲಿ ಪತಿಯಂದಿರಿಗೆ ಸಲಹೆ ನೀಡಿದ ಸಿತಿ ಜೈಲಾ ಮೊಹಮ್ಮದ್ ಯುಸೂಫ್, ಹೆಂಡತಿಯಾದವಳು ಅಶಿಸ್ತಿನ ನಡವಳಿಕೆಯನ್ನು ಬದಲಾಯಿಸದೇ ಹೋದಲ್ಲಿ ಅವರ ಜೊತೆಯಲ್ಲಿ ಮೂರು ದಿನಗಳ ಕಾಲ ಮಲಗಬೇಡಿ ಎಂದು ಗಂಡಂದಿರಿಗೆ ಹೇಳಿದ್ದಾರೆ. ಪತ್ನಿಯಿಂದ ಪ್ರತ್ಯೇಕವಾಗಿ ಮಲಗಿದ ಬಳಿಕವೂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆ ತೋರದೇ ಇದ್ದರೆ ನೀವು ಭೌತಿಕವಾದ ಪ್ರಯೋಗವನ್ನು ಮಾಡಬಹುದು. ಹೆಂಡತಿಯ ದುರ್ವರ್ತನೆಯಲ್ಲಿ ಬದಲಾವಣೆಯನ್ನು ತರಲು ಗಂಡನಾದವನು ಮೃದುವಾಗಿ ಹೊಡೆಯಬಹುದಾಗಿದೆ ಎಂದು ಹೇಳಿದ್ದಾರೆ.
ಅಲ್ಲದೇ ಇದರ ಜೊತೆಯಲ್ಲಿ ಪತ್ನಿಯಂದಿರಿಗೂ ಕೆಲವು ಸಲಹೆಗಳನ್ನು ನೀಡಿರುವ ಸಿತಿ ಜೈಲಾ, ನಿಮ್ಮ ಸಂಗಾತಿಯ ಮನಗೆಲ್ಲಬೇಕು ಅಂದರೆ ಅವರ ಅನುಮತಿಯನ್ನು ಪಡೆದ ಬಳಿಕವೇ ಅವರೊಂದಿಗೆ ಮಾತನಾಡಿ. ಪತಿಯು ಶಾಂತಚಿತ್ತರಾಗಿ ಇದ್ದಾಗ ಮಾತ್ರ ಪತ್ನಿಯು ಆತನೊಂದಿಗೆ ಮಾತನಾಡಬಹುದು. ಊಟ ಮಾಡಿದ ಬಳಿಕ, ಪ್ರಾರ್ಥನೆ ಸಲ್ಲಿಸಿದ ಬಳಿಕ ಹಾಗೂ ವಿಶ್ರಾಂತಿಯನ್ನು ಪಡೆದ ಬಳಿಕ ಗಂಡನೊಂದಿಗೆ ಮಾತನಾಡಲು ಉತ್ತಮ ಸಮಯವಾಗಿದೆ ಎಂದು ಹೇಳಿದ್ದಾರೆ. ಸಿತಿ ಜೈಲಾ ಮೊಹಮ್ಮದ್ ಯುಸೂಫ್ರ ಈ ಎಲ್ಲಾ ಹೇಳಿಕೆಗಳು ಮಹಿಳಾ ವಾದಿಗಳ ಕಣ್ಣು ಕೆಂಪಗಾಗಿಸಿದೆ.
ಜಾಯಿಂಟ್ ಆ್ಯಕ್ಷನ್ ಗ್ರೂಪ್ ಫಾರ್ ಜೆಂಡರ್ ಇಕ್ವಾಲಿಟಿ ಸಂಘವು ಈ ಕೌಟುಂಬಿಕ ದೌರ್ಜನ್ಯ ಸಾಮಾನ್ಯ ಎಂದು ಬಿಂಬಿಸುವಂತೆ ಹೇಳಿಕೆ ನೀಡಿದ ಸಿತಿ, ಸಚಿವೆ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿದೆ. ಲಿಂಗ ಸಮಾನತೆ, ಮಹಿಳೆಯರ ರಕ್ಷಣೆ ಹಾಗೂ ಸುರಕ್ಷತೆಯನ್ನು ಈ ಹೇಳಿಕೆಯು ವಿರೋಧಿಸುತ್ತದೆ. ಈ ಹೇಳಿಕೆಯು ಸಂಪೂರ್ಣ ತಪ್ಪು ಹಾಗೂ ಇದೊಂದು ವಿಫಲ ನಾಯಕತ್ವದ ಸಂಕೇತ ಎಂದು ಕಿಡಿಕಾರಿದೆ.
https://youtu.be/PucBX6T0Tbo