ನವದೆಹಲಿ: ಭಾರತದಲ್ಲಿ ಕಳೆದ 2 ವರ್ಷಗಳಲ್ಲಿ ಕಾಣೆಯಾದ ಮಕ್ಕಳ ಪ್ರಕರಣಗಳಲ್ಲಿ ತೀವ್ರ ಏರಿಕೆ ಕಂಡಿದೆ. ಈ ಬಗ್ಗೆ ಮಕ್ಕಳ ಹಕ್ಕುಗಳ ಎನ್‌ಜಿಒಗಳು ಕಳವಳಗೊಂಡಿವೆ.
ಪರಿಸ್ಥಿತಿ ಹದಗೆಡುವುದನ್ನು ತಡೆಯಲು ಗ್ರಾಮ ಮಟ್ಟದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳನ್ನು ಕೂಡಲೇ ಬಲಪಡಿಸಬೇಕು. ಪೋಷಕರನ್ನು ಜಾಗೃತಗೊಳಿಸಬೇಕು ಮತ್ತು ತರಬೇತಿ ನೀಡಬೇಕು ಎಂದು ಸಂಘಟನೆಗಳು ಕರೆ ನೀಡಿದ್ದು, ಈ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ಬಜೆಟ್ ಹಂಚಿಕೆ ಮಾಡುವಂತೆ ಒತ್ತಾಯಿಸಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2020 ರಲ್ಲಿ ಭಾರತದಲ್ಲಿ 59,262 ಮಕ್ಕಳು ಕಾಣೆಯಾಗಿದ್ದಾರೆ. ಹಿಂದಿನ ವರ್ಷದ 48,972 ಮಕ್ಕಳು ಪತ್ತೆಯಾಗದೆ ಉಳಿದಿದ್ದಾರೆ. ಒಟ್ಟು ಕಾಣೆಯಾದ ಮಕ್ಕಳ ಸಂಖ್ಯೆ 1,08,234 ಕ್ಕೆ ಏರಿದೆ.
2008 ಮತ್ತು 2020ರ ನಡುವೆ ವಾರ್ಷಿಕವಾಗಿ ವರದಿಯಾದ ಮಕ್ಕಳ ಕಾಣೆಯಾದ ಪ್ರಕರಣಗಳ ಸಂಖ್ಯೆಯಲ್ಲಿ ಸುಮಾರು 13 ಪಟ್ಟು ಏರಿಕೆಯಾಗಿದೆ ಎಂದು ಎನ್‌ಸಿಆರ್‌ಬಿ ಹೇಳಿದೆ. ಅಂಕಿಅಂಶಗಳ ಪ್ರಕಾರ, 2008 ರಲ್ಲಿ 7,650 ಮಕ್ಕಳು ಕಾಣೆಯಾದ ಪ್ರಕರಣಗಳು ವರದಿಯಾಗಿವೆ.
ಕಳೆದ ಎರಡು ವರ್ಷಗಳಲ್ಲಿ ಬಚ್ಪನ್ ಬಚಾವೋ ಆಂದೋಲನ (ಬಿಬಿಎ), ಕೈಲಾಶ್ ಸತ್ಯಾರ್ಥಿ ಫೌಂಡೇಶನ್‌ನ ಸಹೋದರಿ ಸಂಸ್ಥೆಯು ದೇಶಾದ್ಯಂತ ಸುಮಾರು 12,000 ಮಕ್ಕಳನ್ನು ರಕ್ಷಿಸಿದೆ ಎಂದು ಅದರ ಕಾರ್ಯನಿರ್ವಾಹಕ ನಿರ್ದೇಶಕ ಧನಂಜಯ್ ತಿಂಗಳಲ್ ಹೇಳಿದ್ದಾರೆ.
ಸಾಂಕ್ರಾಮಿಕ ರೋಗದ ನಂತರ, ಮಕ್ಕಳ ಕಳ್ಳಸಾಗಣೆ ಹಲವಾರು ಪಟ್ಟು ಹೆಚ್ಚಾಗಿದೆ ಎಂಬುದನ್ನು ತೋರಿಸಲು ಇದು ಸಾಕಷ್ಟು ಪುರಾವೆಯಾಗಿದೆ ಎಂದು ಧನಂಜಯ್ ತಿಂಗಳಲ್ ತಿಳಿಸಿದ್ದಾರೆ.
2021 ರಲ್ಲಿ ಮಧ್ಯಪ್ರದೇಶದಲ್ಲಿ ಸರಾಸರಿ 29 ಮತ್ತು ರಾಜಸ್ಥಾನದಲ್ಲಿ 14 ಮಕ್ಕಳು ಪ್ರತಿದಿನ ಕಾಣೆಯಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಕೆಲವು ಮಕ್ಕಳನ್ನು ಅವರ ಪೋಷಕರ ಒಪ್ಪಿಗೆಯೊಂದಿಗೆ ಕಳ್ಳಸಾಗಣೆ ಮಾಡಲಾಗುತ್ತಿದ್ದರೆ, ಇನ್ನು ಕೆಲವರು ಕಳ್ಳತನ ಮೂಲಕ ಮಕ್ಕಳನ್ನು ಸಾಗಣೆ ಮಾಡಲಾಗುತ್ತಿದೆ ಎನ್ನಲಾಗಿದೆ.
ಹೆಚ್ಚಿದ ಬಡತನ ಮಕ್ಕಳು ಕಾಣೆಯಾಗಲು ಅಥವಾ ಕಳ್ಳಸಾಗಾಣಿಕೆಗೆ ಬಲಿಯಾಗಲು ಪ್ರಮುಖ ಕಾರಣವಾಗಿದೆ. ಕೋವಿಡ್-19 ಲಾಕ್‌ಡೌನ್ ಮತ್ತು ನಿರ್ಬಂಧಗಳಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಮಕ್ಕಳ ರಕ್ಷಣಾ ವಿಭಾಗದ ಉಪನಿರ್ದೇಶಕ ಪ್ರಭಾತ್ ಕುಮಾರ್ ಹೇಳಿದ್ದಾರೆ.