ಒಮಿಕ್ರಾನ್ ವಿಶ್ವಕ್ಕೆ ಪರಿಚಯವಾಗಿ ತಿಂಗಳುಗಳಾಗಿದೆ ಅಷ್ಟೇ. ಆದರೆ ಅದರ ಪರಿಣಾಮ ಹಾಗೂ ಈ ರೂಪಾಂತರಿ ಹರಡುತ್ತಿರೊ ವೇಗಕ್ಕೆ ಕಡಿವಾಣ ಹಾಕೋಕೆ ಆಗ್ತಿಲ್ಲ. ಈಗಾಗ್ಲೇ ವಿಶ್ವದ ಹಲವು ದೇಶಗಳು ಒಮಿಕ್ರಾನ್ ಪರಿಣಾಮದಿಂದ ಕೊರೋನಾ ವೈರಸ್ ನ ಹೊಸ ಅಲೆ ಎದುರಿಸುತ್ತಿದ್ದಾರೆ. ಕೆಲವು ದೇಶಗಳಲ್ಲಿ ಲಾಕ್ ಡೌನ್ ಜಾರಿಯಾಗಿದೆ.
ಭಾರತದಲ್ಲೂ ಆ್ಯಕ್ಟೀವ್ ಆಗಿರುವ ಒಮಿಕ್ರಾನ್ ಲಯಕ್ಕೆ ಮರಳಿದ್ದ ದೇಶವನ್ನ ಮತ್ತೊಂದು ಅಲೆಗೆ ತಳ್ಳುತ್ತಿದೆ. ಭಾರತದಲ್ಲಿ ಈಗಾಗ್ಲೇ 1889 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಪ್ರತಿದಿನ ಕೇಸ್ ಗಳು ಹೆಚ್ಚಾಗುತ್ತಲೆ ಇವೆ.
ಈವರೆಗೂ ಪತ್ತೆಯಾಗಿರುವ ರೂಪಾಂತರಿಗಳಲ್ಲಿ ಒಮಿಕ್ರಾನ್ ವಿಭಿನ್ನ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಾಕಷ್ಟು ಬಾರಿ ಎಚ್ಚರಿಸಿದೆ. ಸಧ್ಯಕ್ಕೆ ಲಭ್ಯವಿರುವ ಅಧ್ಯಯನಗಳು ಹಾಗೂ ವಿಶ್ಲೇಷಣೆಗಳು ಸಹ ಇದೆ ಅಂಶವನ್ನ ಒತ್ತಿ ಹೇಳಿವೆ.
ಈಗ ಒಮಿಕ್ರಾನ್ ವೈರಸ್ ಬಗ್ಗೆ ಮತ್ತೊಂದು ಸ್ಪೋಟಕ ಅಂಶ ಬಯಲಾಗಿದೆ. ಹಾಂಗ್ ಕಾಂಗ್ ವಿಶ್ವವಿದ್ಯಾಲಯ ಒಮಿಕ್ರಾನ್ ಬಗ್ಗೆ ನಡೆಸಿದ ಅಧ್ಯಯನದ ವರದಿಯಲ್ಲಿ ಸಾಕಷ್ಟು ಮಾಹಿತಿ ತಿಳಿದು ಬಂದಿದೆ.
ಹಾಂಗ್ ಕಾಂಗ್ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಏನಿದೆ..?
ಒಮಿಕ್ರಾನ್ ಪತ್ತೆಯಾದ್ಮೇಲೆ ಈ ಹೊಸ ರೂಪಾಂತರಿಯ ಬಗ್ಗೆ ವಿಶ್ವದ ಎಲ್ಲೆಡೆ ಸಂಶೋಧನೆ ಶುರುವಾಯ್ತು. ವಿಶ್ವಸಂಸ್ಥೆ ಕೂಡ ಪ್ರತಿ ದೇಶಗಳಿಗೂ, ನಿಮ್ಮಲ್ಲಿ ಒಮಿಕ್ರಾನ್ ಪತ್ತೆಯಾದರೆ ಅದರ ಅಧ್ಯಯನ ಮಾಡಿ ವರದಿ ನೀಡಿ ಎಂದು ಹೇಳಿತ್ತು.
ಹಾಂಗ್ ಕಾಂಗ್ ನಲ್ಲಿ ಈ ಬಗ್ಗೆ ಸಂಕ್ಷಿಪ್ತವಾಗಿ ಅಧ್ಯಯನ ನಡೆಯುತ್ತಿದೆ. ಸಧ್ಯ ವಿಶ್ವವಿದ್ಯಾಲಯ ಬಿಡುಗಡೆ ಮಾಡಿರುವ ಅಧ್ಯಯನ ವರದಿಯಲ್ಲಿ, ಈ ರೂಪಾಂತರಿ ಡೆಲ್ಟಾ ವೇರಿಯಂಟ್ ಗಿಂತ ವೇಗವಾಗಿದೆ. ಈವರೆಗೂ ಅತ್ಯಂತ ಪ್ರಭಾವಿ ವೈರಸ್ ಎಂದು ಕರೆಸಿಕೊಳ್ಳುತ್ತಿದ್ದ ಡೆಲ್ಟಾ ವೈರಸ್ ಗಿಂತ ಒಮಿಕ್ರಾನ್ 70%ವೇಗವಾಗಿ ಹರಡುತ್ತದೆ ಎಂದು ತಿಳಿದುಬಂದಿದೆ.
ಆದರೆ ವೇಗವಾಗಿ ಹರಡೋದಕ್ಕೆ ಕಾರಣ ಏನು ಎಂಬುದು ಇನ್ನು ತಿಳಿದಿಲ್ಲ. ಈ ಬಗ್ಗೆ ಅಧ್ಯಯನ ಮುಂದುವರೆದಿದೆ. ಕೊರೋನಾ ವೈರಸ್ ಗೆ ತುತ್ತಾದ ಹಲವರಲ್ಲಿ ಉಸಿರಾಟದ ಸಮಸ್ಯೆ ಕಾಡತ್ತೆ ಅನ್ನೋದು ಈಗಾಗ್ಲೇ ಅಧ್ಯಯನಗಳಿಂದ ತಿಳಿದು ಬಂದಿದೆ.
ಈ ಒಮಿಕ್ರಾನ್ ಸೋಂಕು ಹೆಚ್ಚಾದರೆ ಉಸಿರಾಟದ ಸಮಸ್ಯೆ ಎದುರಾಗುತ್ತಾ ಅನ್ನೋ ಪ್ರಶ್ನೆಯು ಎಲ್ಲರನ್ನು ಕಾಡುತ್ತಿತ್ತು. ಈ ಅಧ್ಯಯನದಲ್ಲಿ ಈ ಬಗ್ಗೆಯು ವರದಿಯಾಗಿದ್ದು ಒಮಿಕ್ರಾನ್ ಸೋಂಕು ಹರಡಿದ ವ್ಯಕ್ತಿಯಲ್ಲಿ ಉಸಿರಾಟದ ಸಮಸ್ಯೆ ಕಂಡುಬರುತ್ತೆ ಎಂದು ದೃಢವಾಗಿದೆ. ಆದರೆ ಶ್ವಾಸಕೋಶದ ಮೇಲೆ ಇದರ ಪರಿಣಾಮ ಕಡಿಮೆ ಅನ್ನೋ ಅಂಶವೂ ಅಧ್ಯಯನದಲ್ಲಿ ಬೆಳಕಿಗೆ ಬಂದಿದೆ.