ಗಡಿಪಾರು ಮಾಡಿರೋ ಕಾರ್ಮಿಕರನ್ನು ಮತ್ತೆ ಕುವೈತ್ಗೆ ಕರೆದೊಯ್ಯಲು ಬೆರಳಚ್ಚು ಶಸ್ತ್ರಚಿಕಿತ್ಸೆ ದಂಧೆಯನ್ನೇ ನಡೆಸ್ತಾ ಇದ್ದ ಜಾಲವೊಂದನ್ನು ತೆಲಂಗಾಣ ಪೊಲೀಸರು ಭೇದಿಸಿದ್ದಾರೆ. ಖಚಿತ ಸುಳಿವಿನ ಮೇರೆಗೆ ಮಲ್ಕಾಜ್ಗಿರಿ ವಿಶೇಷ ಕಾರ್ಯಾಚರಣೆ ತಂಡ ಪೊಲೀಸರ ಜೊತೆಗೂಡಿ ಅಣ್ಣೋಜಿಗುಡಾದಲ್ಲಿರುವ ಹೋಟೆಲ್ ಹ್ಯಾಪಿ ರೆಸಿಡೆನ್ಸಿಯ ಓಯೋ ರೂಮ್ ಮೇಲೆ ದಾಳಿ ನಡೆಸಿತು.
ಅಲ್ಲಿ ನಾಲ್ವರು ಈ ಬೆರಳಚ್ಚು ಶಸ್ತ್ರಚಿಕಿತ್ಸೆ ನಡೆಸುತ್ತಿದ್ದರು. ಇದರ ಹಿಂದೆ ದೊಡ್ಡ ಜಾಲವೇ ಇರುವುದು ಬೆಳಕಿಗೆ ಬಂದಿದೆ. ಹೊಸ ಗುರುತನ್ನು ಬಯಸಿದ ಜನರಿಗೆ ಬೆರಳಿನ ಶಸ್ತ್ರಚಿಕಿತ್ಸೆ ಮಾಡ್ತಾ ಇದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಶಸ್ತ್ರಚಿಕಿತ್ಸೆ ಮೂಲಕ ಬೆರಳುಗಳ ಮೇಲಿನ ಗೆರೆಗಳನ್ನು ಬದಲಾಯಿಸುತ್ತಿದ್ದರು.
ಬಂಧಿತ ವ್ಯಕ್ತಿಗಳಲ್ಲಿ ರೇಡಿಯಾಲಜಿಸ್ಟ್, ಅರಿವಳಿಕೆ ತಂತ್ರಜ್ಞ ಮತ್ತು ಇಬ್ಬರು ಕಟ್ಟಡ ಕಾರ್ಮಿಕರು ಸೇರಿದ್ದಾರೆ. ರೇಡಿಯಾಲಜಿಸ್ಟ್ ಜಿ. ನಾಗ ಮುನೇಶ್ವರ ರೆಡ್ಡಿ ಚಂದ್ರಗಿರಿಯ ಡಯಾಗ್ನೋಸ್ಟಿಕ್ ಸೆಂಟರ್ನಲ್ಲಿ ಕೆಲಸ ಮಾಡ್ತಿದ್ದ. ಅರಿವಳಿಕೆ ತಂತ್ರಜ್ಞ ಎಸ್. ವೆಂಕಟರಮಣ ತಿರುಪತಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕಡಪ ಜಿಲ್ಲೆಯ ಬಿ. ಶಿವಶಂಕರ ರೆಡ್ಡಿ ಮತ್ತು ಆರ್. ರಾಮಕೃಷ್ಣ ರೆಡ್ಡಿ ಬಂಧಿತ ಕಟ್ಟಡ ಕಾರ್ಮಿಕರು.
25,000 ರೂಪಾಯಿ ಪಡೆದು ಇವರು ಫಿಂಗರ್ಪ್ರಿಂಟ್ ಸರ್ಜರಿ ಮಾಡಿ ಕೊಡ್ತಾ ಇದ್ರು. ಈ ಮೂಲಕ ಗಡೀಪಾರಾದವರು ಹೊಸ ಗುರುತಿನೊಂದಿಗೆ ಮತ್ತೆ ಕುವೈತ್ ಪ್ರವೇಶಿಸುತ್ತಿದ್ದರು. ಹೊಸ ವೀಸಾಗಳನ್ನು ಪಡೆಯಲು ಈ ಶಸ್ತ್ರಚಿಕಿತ್ಸೆ ನೆರವಾಗುತ್ತಿತ್ತು. ರಾಜಸ್ಥಾನ ಮತ್ತು ಕೇರಳದಲ್ಲಿ ಫಿಂಗರ್ಪ್ರಿಂಟ್ ಮಾದರಿಗಳನ್ನು ಬದಲಾಯಿಸಲು ಸುಮಾರು 11 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗಿದೆ. ಕ್ರಿಮಿನಲ್ ಚಟುವಟಿಕೆಗಾಗಿ ಕುವೈತ್ನಿಂದ ಗಡೀಪಾರಾಗಿದ್ದವರು ಈ ಸರ್ಜರಿ ಮಾಡಿಸಿಕೊಂಡಿದ್ದಾರೆ.
ಬೆರಳಚ್ಚು ಶಸ್ತ್ರಚಿಕಿತ್ಸೆಯನ್ನು ನಡೆಸಿ ಮೂವರನ್ನು ಕುವೈತ್ಗೆ ಕಳುಹಿಸಿರೋದು ಬೆಳಕಿಗೆ ಬಂದಿದೆ. ಶಸ್ತ್ರಚಿಕಿತ್ಸೆಗಳನ್ನು ಮಾಡಲು ಬೆರಳ ತುದಿಯ ಮೇಲಿನ ಪದರವನ್ನು ಕತ್ತರಿಸಿ, ಅಂಗಾಂಶದ ಒಂದು ಭಾಗವನ್ನು ತೆಗೆದು ಮತ್ತೆ ಹೊಲಿಗೆ ಹಾಕಲಾಗುತ್ತಿತ್ತು. ಒಂದು ಅಥವಾ ಎರಡು ತಿಂಗಳುಗಳಲ್ಲಿ ಗಾಯ ವಾಸಿಯಾಗುತ್ತದೆ ಮತ್ತು ಒಂದು ವರ್ಷದವರೆಗೆ ಬೆರಳಚ್ಚು ಮಾದರಿಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸುತ್ತದೆ. ಕುವೈತ್ ಇಮಿಗ್ರೇಷನ್ನಲ್ಲಿ ಬಳಸುತ್ತಿರುವ ತಂತ್ರಜ್ಞಾನವು ಅಷ್ಟೊಂದು ಮುಂದುವರಿದಿಲ್ಲ ಎಂದು ಶಂಕಿತರಿಗೆ ತಿಳಿದಿತ್ತು.
ಇದರ ಲಾಭ ಪಡೆದು ಸಣ್ಣಪುಟ್ಟ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ವ್ಯಕ್ತಿಗಳು ಬೆರಳಚ್ಚು ತಿದ್ದುವ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವುದರಲ್ಲಿ ಮಗ್ನರಾಗಿದ್ದರು. ತಮ್ಮ ವಸತಿ ವಿಳಾಸವನ್ನು ಬದಲಾಯಿಸುವ ಮೂಲಕ ಆಧಾರ್ ಕೇಂದ್ರದಲ್ಲಿ ತಮ್ಮ ಬೆರಳಚ್ಚುಗಳನ್ನು ನವೀಕರಿಸಿಕೊಂಡಿದ್ದಾರೆ. ನಂತರ ಕುವೈತ್ಗೆ ಕೆಲಸದ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಹೊಸ ವೀಸಾದಲ್ಲಿ ಕುವೈತ್ಗೆ ಪ್ರಯಾಣಿಸುತ್ತಾರೆ. ಈ ಹೊಸ ಬೆರಳಚ್ಚುಗಳು ಅದೇ ಸ್ಥಿತಿಯಲ್ಲಿ ಒಂದು ವರ್ಷದವರೆಗೆ ಇರುತ್ತವೆ.