ಆಂಬ್ಯುಲೆನ್ಸ್‌ಗೆ ಕೊಡಲು ಹಣವಿಲ್ಲದೇ ಅಸಹಾಯಕ ಮಗನೊಬ್ಬ ತನ್ನ ತಾಯಿಯ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿದ ಹೃದಯ ವಿದ್ರಾವಕ ದೃಶ್ಯ ಪಶ್ಚಿಮ ಬಂಗಾಳದಲ್ಲಿ ಸೆರೆಯಾಗಿದೆ. ಈತ ತಾಯಿಯ ಶವವನ್ನು ಹೊತ್ತುಕೊಂಡು ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ತನ್ನ ಮನೆಯ ಕಡೆಗೆ ನಡೆದುಕೊಂಡೇ ಸಾಗಿದ್ದ. ಆದರೆ ಸ್ವಲ್ಪ ಸಮಯದ ನಂತರ ಸಾಮಾಜಿಕ ಸೇವಾ ಸಂಸ್ಥೆಯೊಂದು ವ್ಯಕ್ತಿಗೆ ವಾಹನವನ್ನು ಒದಗಿಸಿದ್ದು, ಶವವನ್ನು ಮನೆಗೆ ಕರೆದೊಯ್ದಿದೆ.
ಈ ಘಟನೆ ಬೆನ್ನಲ್ಲೇ ರಾಜಕೀಯ ಕೆಸರೆರಚಾಟವೂ ಶುರುವಾಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಅಮಿತ್ ಮಾಳವಿಯಾ, ಇದು ಮಮತಾ ಬ್ಯಾನರ್ಜಿಯವರ ಆಡಳಿತದ ಮಾದರಿ ಎಂದು ಜರಿದಿದ್ದಾರೆ. ರಾಮ್ ಪ್ರಸಾದ್ ದಿವಾನ್ ಎಂಬಾತನ 72 ವರ್ಷದ ತಾಯಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಆಕೆಯನ್ನು ಜಲ್ಪೈಗುರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು. ಆಸ್ಪತ್ರೆಗೆ ಕರೆತಂದಿದ್ದ ಆಂಬ್ಯುಲೆನ್ಸ್‌ಗೆ 900 ರೂಪಾಯಿಯನ್ನು ಆತ ಪಾವತಿಸಿದ್ದ. ಆದ್ರೆ ಶವ ಕೊಂಡೊಯ್ಯಲು ಆಂಬ್ಯುಲೆನ್ಸ್ ನಿರ್ವಾಹಕ 3000 ರೂಪಾಯಿ ಕೇಳಿದ್ದಾನೆ.
ಅಷ್ಟೊಂದು ಹಣವಿಲ್ಲದೇ ಇದ್ದಿದ್ರಿಂದ ರಾಮ್ ಪ್ರಸಾದ್, ತನ್ನ ತಾಯಿಯ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿಕೊಂಡು, ಅದನ್ನು ಭುಜದ ಮೇಲೆ ಹೊತ್ತುಕೊಂಡೇ ನಡೆಯಲಾರಂಭಿಸಿದ್ದ. ಆತನ ವೃದ್ಧ ತಂದೆ ಕೂಡ ಜೊತೆಗಿದ್ದರು. ಆಸ್ಪತ್ರೆಯ ಅಧೀಕ್ಷಕ ಕಲ್ಯಾಣ್ ಖಾನ್ ಈ ಘಟನೆಯನ್ನು ತುಂಬಾ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ವಿಷಯ ತಿಳಿಸಿದ್ದರೆ ಶವಸಂಸ್ಕಾರಕ್ಕೆ ಏರ್ಪಾಡು ಮಾಡುತ್ತಿದ್ದೆ ಎಂದಿದ್ದಾರೆ.
ಆಂಬ್ಯುಲೆನ್ಸ್ ನಿರ್ವಾಹಕರು ಉಚಿತ ಸೇವೆ ನೀಡುವವರನ್ನು ಆಸ್ಪತ್ರೆ ಬಳಿ ಹೋಗಲು ಬಿಡುತ್ತಿಲ್ಲ ಎಂದು ರಾಮ್ ಪ್ರಸಾದ್‌ಗೆ ಸಹಾಯ ಮಾಡಿದ ಸಮಾಜ ಸೇವಾ ಸಂಸ್ಥೆಯ ಪದಾಧಿಕಾರಿಯೊಬ್ಬರು ಆರೋಪಿಸಿದ್ದಾರೆ. ಆದರೆ ಆರೋಪವನ್ನು ನಿರಾಕರಿಸಿದ ಜಿಲ್ಲಾ ಆಂಬ್ಯುಲೆನ್ಸ್ ಅಸೋಸಿಯೇಷನ್ ತಮ್ಮ ಸದಸ್ಯರು ರೈಲು ಮತ್ತು ರಸ್ತೆ ಅಪಘಾತಗಳ ಸಮಯದಲ್ಲಿ ಉಚಿತ ಸೇವೆಯನ್ನು ಸಹ ನೀಡುತ್ತಾರೆ ಎಂದು ಪ್ರತಿಪಾದಿಸಿದ್ದಾರೆ.