2019ರಲ್ಲಿ ಪದ್ಮಶ್ರೀ ಪುರಸ್ಕೃತರಾಗಿರುವ ಕಮಲಾ ಪೂಜಾರಿ ಅನಾರೋಗ್ಯದಿಂದಾಗಿ ಆಸ್ಪತ್ರೆ ಸೇರಿದ್ದರು. ಅಲ್ಲಿ ಆಕೆ ಡಿಸ್ಚಾರ್ಜ್ ಆಗುವ ಮುನ್ನ ಬಲವಂತವಾಗಿ ಅವರ ಬಳಿ ನೃತ್ಯ ಮಾಡಿಸಲಾಗಿದೆ.
ವೀಡಿಯೊ ವೈರಲ್ ಆಗ್ತಿದ್ದಂತೆ ಪರಜಾ ಬುಡಕಟ್ಟು ಸಮುದಾಯದ ಸದಸ್ಯರು, ನೃತ್ಯ ಮಾಡುವಂತೆ ಕಮಲಾ ಪೂಜಾರಿ ಅವರನ್ನು ಒತ್ತಾಯಿಸಿದ ಸಾಮಾಜಿಕ ಕಾರ್ಯಕರ್ತೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಮೂತ್ರಪಿಂಡದ ಕಾಯಿಲೆಯಿಂದ ಕಮಲಾ ಪೂಜಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸರ್ಕಾರಿ ಆಸ್ಪತ್ರೆಯ ಐಸಿಯುನಲ್ಲಿ 70 ವರ್ಷದ ಮಹಿಳೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿನ್ನೆಲೆಯಲ್ಲಿ ಸಂಗೀತದೊಂದಿಗೆ ಸಾಮಾಜಿಕ ಕಾರ್ಯಕರ್ತೆಯೂ ಅವಳೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
“ನಾನು ಎಂದಿಗೂ ನೃತ್ಯ ಮಾಡಲು ಬಯಸಲಿಲ್ಲ ಆದರೆ ಬಲವಂತ ಮಾಡಿದ್ರು. ನಾನು ಅದನ್ನು ಪದೇ ಪದೇ ನಿರಾಕರಿಸಿದೆ, ಆದರೆ ಅವಳು (ಸಮಾಜ ಕಾರ್ಯಕರ್ತೆ) ಕೇಳಲಿಲ್ಲ. ನಾನು ಅಸ್ವಸ್ಥನಾಗಿದ್ದೆ ಮತ್ತು ದಣಿದಿದ್ದೆ, ಆದರೂ ನೃತ್ಯ ಮಾಡಬೇಕಾಯ್ತು”ಎಂದು ಕಮಲಾ ಪೂಜಾರಿ ಹೇಳಿದ್ದಾರೆ. ಮಮತಾ ಬೆಹೆರಾ ಎಂಬ ಸಮಾಜ ಸೇವಕಿ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಹೋರಾಟ ಮಾಡುವುದಾಗಿ ಬುಡಕಟ್ಟು ಸಮುದಾಯದ ಪರಜಾ ಸಮಾಜದ ಅಧ್ಯಕ್ಷ ಹರೀಶ್ ಮುದುಳಿ ಹೇಳಿದ್ದಾರೆ.
ಸಾವಯವ ಕೃಷಿಗೆ ಉತ್ತೇಜನ ಮತ್ತು ಭತ್ತ ಸೇರಿದಂತೆ ವಿವಿಧ ಬೆಳೆಗಳ 100 ಕ್ಕೂ ಹೆಚ್ಚು ದೇಶೀಯ ಬೀಜಗಳನ್ನು ಸಂರಕ್ಷಿಸಿದ್ದಕ್ಕಾಗಿ 2019ರಲ್ಲಿ ಕಮಲಾ ಪೂಜಾರಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. ಮೂತ್ರಪಿಂಡದ ಕಾಯಿಲೆ ಹಿನ್ನೆಲೆಯಲ್ಲಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುನ್ನ ಈ ಘಟನೆ ನಡೆದಿದೆ.ಯಾವುದೇ ಕೆಟ್ಟ ಉದ್ದೇಶದಿಂದ ನೃತ್ಯ ಮಾಡಿಸಿಲ್ಲ, ಕಮಲಾ ಪೂಜಾರಿ ಆಕ್ಟಿವ್ ಆಗಲಿ ಅನ್ನೋ ಕಾರಣಕ್ಕೆ ನೃತ್ಯ ಮಾಡಿಸಿದೆ ಅಂತಾ ಸಾಮಾಜಿಕ ಕಾರ್ಯಕರ್ತೆ ಸಮರ್ಥಿಸಿಕೊಂಡಿದ್ದಾಳೆ.