ದೆಹಲಿಯಲ್ಲಿನ ಉತ್ತರಪ್ರದೇಶ ಭವನ (ಯುಪಿ ಭವನ) ದಲ್ಲಿ ರಾಜಕೀಯ ಮುಖಂಡರೊಬ್ಬರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂಬ ಆರೋಪ ಕೇಳಿಬಂದಿದ್ದು ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಭವನದ ಆವರಣದಲ್ಲಿರುವ ಒಂದು ಕೋಣೆಯನ್ನು ಪೊಲೀಸರು ಸೀಲ್ ಮಾಡಿದ್ದಾರೆ. ಮೇ 26 ರಂದು ಘಟನೆ ನಡೆದಿದ್ದು, ಅದೇ ದಿನ ಮಹಿಳೆ ಚಾಣಕಿಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ದಿನದಂದು ಮಧ್ಯಾಹ್ನ 12.15 ರ ಸುಮಾರಿಗೆ ಆರೋಪಿ ಕೋಣೆಗೆ ಪ್ರವೇಶಿಸಿ 1.05 ರ ಸುಮಾರಿಗೆ ಹೊರಗೆ ಹೋಗುವುದನ್ನು ಸಿಸಿ ಕ್ಯಾಮೆರಾ ದೃಶ್ಯಾವಳಿ ತೋರಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿ ಮಹಾರಾಣಾ ಪ್ರತಾಪ್ ಸೇನಾ ಎಂಬ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್ಯವರ್ಧನ್ ಸಿಂಗ್ ಪರ್ಮಾರ್ ಎಂದು ಮೂಲಗಳು ತಿಳಿಸಿವೆ.
ಇಬ್ಬರು ಮಂತ್ರಿಗಳು ತಮ್ಮ ವೃತ್ತಿಜೀವನಕ್ಕೆ ಸಹಾಯ ಮಾಡುತ್ತಾರೆಂದು ನಂಬಿಸಿ ನನ್ನನ್ನು ಕೋಣೆಯೊಳಕ್ಕೆ ಕರೆದೊಯ್ಯಲಾಯಿತು. ಆದರೆ ಒಳಗೆ ಹೋದಾಗ ಕೋಣೆಯಲ್ಲಿ ಯಾರೂ ಇರಲಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
ಬಳಿಕ ಕೊಠಡಿಯನ್ನು ಒಳಗಿನಿಂದ ಮುಚ್ಚಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ಇಲಾಖಾ ತನಿಖೆಗೆ ಆದೇಶಿಸಿದೆ. ಯುಪಿ ಭವನದಲ್ಲಿ ನಿಯೋಜನೆಗೊಂಡಿದ್ದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.ಕೊಠಡಿ ಕಾಯ್ದಿರಿಸಲು ಅರ್ಹರಲ್ಲದಿದ್ದರೂ ಆರೋಪಿಗೆ ಕೊಠಡಿ ಮಂಜೂರು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆರೋಪಗಳ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.