ಹೊಟೇಲ್‌ಗಳಲ್ಲಿ, ಕ್ಯಾಂಟಿನ್ ಊಟದಲ್ಲಿ ಆಗಾಗ ಜಿರಳೆಗಳ ಕೈಕಾಲು ಕಾಣಿಸಿಕೊಳ್ತಾನೇ ಇರುತ್ತೆ. ಇದಕ್ಕೆ ಕಾರಣ ಅಡುಗೆ ಮಾಡುವಾಗ ಆಗುವ ನಿರ್ಲಕ್ಷ್ಯತನ. ಆದರೆ ಈಗ ದೆಹಲಿಯಲ್ಲಿರುವ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್) 4 ವರ್ಷದ ಮಗುವಿಗೆ ನೀಡಿದ ಊಟದಲ್ಲಿ ಜಿರಳೆ ಪತ್ತೆಯಾಗಿದೆ.
ನಾಲ್ಕು ವರ್ಷದ ಮಗುವೊಂದು ಕರುಳಿನ ಮೇಲೆ ಪರಿಣಾಮ ಬೀರುವ ಮತ್ತು ಮಲ ಹೊರಹೋಗುವ ಸಮಸ್ಯೆಯ ಚಿಕಿತ್ಸೆಗೆಂದು ದೆಹಲಿ ಏಮ್‌ಗೆ ದಾಖಲಾಗಿದ್ದ. ಮಗುವಿಗೆ ಶಸ್ತ್ರಚಿಕಿತ್ಸೆ ಬಳಿಕ ಆಸ್ಪತ್ರೆಯವರೇ ಊಟವನ್ನ ನೀಡಿದ್ದಾರೆ. ಇವರು ಕೊಟ್ಟಿರುವ ಊಟದಲ್ಲಿ ಜಿರಳೆ ಪತ್ತೆಯಾಗಿದೆ.
ಘಟನೆಯ ಕುರಿತು ಟ್ವಿಟರ್ ಬಳಕೆಯದಾರು ಫೋಟೋ ಶೇರ್ ಮಾಡಿಕೊಂಡಿದ್ದಾರೆ. “ರಾಷ್ಟ್ರ ರಾಜಧಾನಿಯ ಅತ್ಯಂತ ಪ್ರತಿಷ್ಠಿತ ವೈದ್ಯಕೀಯ ಸೌಲಭ್ಯದ ಭಯಾನಕ ಸ್ಥಿತಿ ಇದು. ನಾಲ್ಕು ವರ್ಷದ ಮಗುವಿನ ಶಸ್ತ್ರಚಿಕಿತ್ಸೆ ಬಳಿಕ ನಡೆದಿರುವ ಘಟನೆ ನಂಬಲು ಅಸಾಧ್ಯ” ಎಂದು ಬರೆದುಕೊಂಡಿದ್ದಾರೆ.
ಮಗುವಿನ ತಾಯಿ ಈ ಘಟನೆ ಕುರಿತಾಗಿ ಹೇಳಿದ್ದು ಏನಂದರೆ “ಶಸ್ತ್ರಚಿಕಿತ್ಸೆ ಬಳಿಕ ವೈದ್ಯರು ಮಗುವಿಗೆ ಮೆದುವಾಗಿರುವ ಆಹಾರ ನೀಡುವಂತೆ ಸೂಚಿಸಿದ್ದರು. ಹಾಗಾಗಿ ಒಂದು ಬಟ್ಟಲಷ್ಟು ಬೇಳೆ ನೀಡುವಂತೆ ಆಸ್ಪತ್ರೆ ಸಿಬ್ಬಂದಿಗಳನ್ನು ಕೇಳಿದ್ದೆ. ಮಗು ಮೊದಲು ತುತ್ತು ತಿನ್ನುತ್ತಿರುವಾಗಲೇ ಜಿರಳೆ ಭಾಗ ಕಾಣಿಸಿತು. ತಕ್ಷಣವೇ ಊಟ ಉಗಿಯುವಂತೆ ಹೇಳಿದೆ”
ಜೊತೆಗೆ “ಇಲ್ಲಿನ ವೈದ್ಯರು ರೋಗಿಗಳಿಗೆ ಸ್ಪಂದಿಸುವ ರೀತಿ ಚೆನ್ನಾಗಿದೆ. ಅವರು ನಮ್ಮ ಮಗುವಿನ ಸಮಸ್ಯೆಗೆ ಚಿಕಿತ್ಸೆ ನೀಡುವ ಪರಿ ಚೆನ್ನಾಗಿದೆ. ನಾನು ಅವರಿಗೆ ಕೃತಜ್ಞಳಾಗಿದ್ದೇನೆ. ಆದರೆ, ಆಹಾರದ ವಿಷಯ ಬಂದಾಗ ಸುರಕ್ಷತೆ ವಹಿಸುವುದು ನನ್ನ ಕಾಳಜಿ. ಜಿರಳೆ ಕಂಡ ತಕ್ಷಣ ನಾನು ಆಸ್ಪತ್ರೆಯ ಅಧಿಕಾರಿಗೆ ಎಚ್ಚರಿಕೆ ನೀಡಿದ್ದೇನೆ. ಅವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ” ಎಂದು ಹೇಳಿದ್ದಾರೆ.
ಆರೋಪಕ್ಕೆ ಪ್ರತಿಕ್ರಿಯಿಸಿರುವ ಏಮ್ ಆಡಳಿತ ಆಸ್ಪತ್ರೆ ಅಧಿಕಾರಿಗಳು, ಘಟನೆ ಕುರಿತು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.