ಕೊಪ್ಪಳ: ಕೋರ್ಟ್ ನಲ್ಲಿ ಸುಳ್ಳು ಸಾಕ್ಷ್ಯ ಹೇಳಿದ ಅಪರಾಧಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅ. 21 ರಂದು ತೀರ್ಪು ನೀಡಿದೆ.
ಕೊಪ್ಪಳ ತಾಲೂಕಿನ ಬಿಸರಳ್ಳಿ ಗ್ರಾಮದ ಚಿದಾನಂದಯ್ಯ ಮುಂಡರಗಿ ಶಿಕ್ಷೆಗೆ ಒಳಗಾದವರು. ಗ್ರಾಮದ ಜಮೀನು ಸರ್ವೇ ನಂಬರ್ ವರ್ಗಾವಣೆ ಮಾಡಿ ಪ್ರತ್ಯೇಕ ಪಹಣಿ ಪತ್ರಿಕೆ ಮಾಡಿಕೊಡಲು ಗ್ರಾಮ ಲೆಕ್ಕಾಧಿಕಾರಿ ರವಿಶೆಟ್ಟಿ ಅವರ ವಿರುದ್ಧ ಲಂಚ ಪಡೆದ ಪ್ರಕರಣದಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಚಿದಾನಂದಯ್ಯ ಅವರ ಮಾಹಿತಿ ಮೇರೆಗೆ ಕೊಪ್ಪಳ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು.
ಪ್ರಕರಣದ ತನಿಖೆಯ ನಂತರ ಗ್ರಾಮ ಲೆಕ್ಕಾಧಿಕಾರಿ ರವಿ ಹಾಗೂ ಅವರ ಸಹಾಯಕ ಶಿವಪುರ ಗ್ರಾಮದ ಮಲ್ಲಯ್ಯ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆಯ ವೇಳೆ ಚಿದಾನಂದಯ್ಯ ದೂರಿಗೆ ತದ್ವಿರುದ್ಧವಾಗಿ ಸಾಕ್ಷಿ ಹೇಳಿದ್ದರು. ಗ್ರಾಮ ಲೆಕ್ಕಾಧಿಕಾರಿಯನ್ನು ಬಿಡುಗಡೆ ಮಾಡಲಾಗಿತ್ತು. ಈ ಆದೇಶದ ವಿರುದ್ಧ ಕೊಪ್ಪಳ ಲೋಕಾಯುಕ್ತ ಪೊಲೀಸರು ಧಾರವಾಡ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಲಂಚ ಪಡೆದ ಆರೋಪಿತರಿಗೆ ಶಿಕ್ಷೆ ಪ್ರಕಟಿಸಿದ ಹೈಕೋರ್ಟ್, ದೂರುದಾರ ಚಿದಾನಂದಯ್ಯ ಸುಳ್ಳು ಸಾಕ್ಷ್ಯ ಹೇಳಿದ್ದಕ್ಕೆ ವಿಚಾರಣೆ ಕೈಗೊಂಡು ಕಾನೂನಿನಡಿ ಕ್ರಮ ಕೈಗೊಳ್ಳುವಂತೆ ಕೊಪ್ಪಳ ಜಿಲ್ಲಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಪ್ರಕರಣದ ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳ ಮೇಲೆ ಆರೋಪಿಯನ್ನು ದೋಷಿ ಎಂದು ಪರಿಗಣಿಸಿದ ಕೊಪ್ಪಳ ಜಿಲ್ಲಾ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ವಸಂತ ಅವರು ವಾದ ಮಂಡಿಸಿದ್ದರು.