
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ಸ್ಥಾನಗಳು ಬಂದ ಹಿನ್ನೆಲೆಯಲ್ಲಿ ಸೋಲಿನ ಪರಾಮರ್ಶೆಗೆ ಸಮಿತಿ ರಚಿಸಲು ಎಐಸಿಸಿ ನಿರ್ಧಾರ ಕೈಗೊಂಡಿದೆ.
ಎಐಸಿಸಿ ನಾಯಕರು, ರಾಜ್ಯ ಕಾಂಗ್ರೆಸ್ ನಾಯಕರನ್ನೊಳಗೊಂಡ ಸಮಿತಿ ರಚನೆಗೆ ತೀರ್ಮಾನ ಕೈಗೊಂಡಿದ್ದು, ಕ್ಷೇತ್ರವಾರು ಮಾಹಿತಿ ಪಡೆದು ಸಮಿತಿ ಪರಿಶೀಲನೆ ನಡೆಸಲಿದೆ. ಸಚಿವರ ಕ್ಷೇತ್ರಗಳಲ್ಲಿ ತೀವ್ರ ಹಿನ್ನಡೆಯಾದ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು.
ಯಾವ ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಸಮಿತಿ ವರದಿ ನೀಡಲಿದೆ. ಇದಕ್ಕೆ ತುರ್ತು ಪರಿಹಾರದ ಅಗತ್ಯವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ. ಹೀಗಾಗಿ ತಮ್ಮ ಭವಿಷ್ಯಕ್ಕೆ ಆತಂಕವಿಲ್ಲ ಎಂದು ಭಾವಿಸಿದ್ದ ಕೆಲವು ಸಚಿವರಿಗೆ ಆತಂಕ ಎದುರಾಗಿದೆ. ಸೋಲಿನ ಪರಾಮರ್ಶೆಗೆ ಸಮಿತಿ ರಚನೆಯ ಮೂಲಕ ತೂಗು ಕತ್ತಿ ಮೇಲೆ ಸಚಿವರ ಭವಿಷ್ಯ ನಿಂತಿದೆ ಎನ್ನಲಾಗಿದೆ.