ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪತ್ನಿ ಮೈತ್ರಾದೇವಿ ಸಾವಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾತ್ರವಿದೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಗಂಭೀರ ಆರೋಪ ಮಾಡಿದ್ದು, ಇದಕ್ಕೆ ಸಂಸದ ಬಿ.ವೈ. ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್ ಅವರೇ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ದಲ್ಲಿ ನಡೆದಿರುವ ಅಕ್ರಮ ನಿವೇಶನ ಹಂಚಿಕೆ ಪ್ರಕರಣದಲ್ಲಿ ನಿಮ್ಮ ಭ್ರಷ್ಟ ನಾಯಕರನ್ನು ಉಳಿಸಿಕೊಳ್ಳಲು, ಪ್ರಕರಣದ ದಿಕ್ಕನ್ನು ಬೇರೆ ಕಡೆ ತಿರುಗಿಸಲು ನನ್ನ ಪೂಜ್ಯ ತಾಯಿಯವರ ಸಹಜ ಸಾವನ್ನು ಆಚಾರವಿಲ್ಲದ ತಮ್ಮ ಎಲುಬಿಲ್ಲದ ನಾಲಿಗೆಯ ಮೂಲಕ ಕಾಂಗ್ರೆಸ್ ಪಕ್ಷದ ಮೂಲ ರಾಜಕೀಯ ಸಂಸ್ಕೃತಿಯಾದ ಲಜ್ಜೆಗೆಟ್ಟ ರಾಜಕಾರಣಕ್ಕೆ ಬಳಸಿಕೊಂಡಿರುವುದು ಆಕ್ಷೇಪಾರ್ಹ ಎಂದು ಹೇಳಿದ್ದಾರೆ.
ಇದು ಅವರ ಸ್ಮರಣೆಗೆ ಮಾತ್ರವಲ್ಲ, ಮಾನವೀಯತೆಯ ಮೂಲಭೂತ ಮೌಲ್ಯಗಳಿಗೂ ಧಕ್ಕೆ ತರುವಂತಹ ಕೃತ್ಯ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ವೈಯಕ್ತಿಕ ನೋವನ್ನು ರಾಜಕೀಯ ಪ್ರಯೋಜನಕ್ಕಾಗಿ ಬಳಸುವುದು ಜನತೆಗೂ, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಕಪ್ಪುಚುಕ್ಕೆ ಇಟ್ಟಂತೆಯೇ ಸರಿ ಎಂದು ತಿಳಿಸಿದ್ದಾರೆ.
ಈ ರೀತಿಯ ನೀಚ ರಾಜಕಾರಣವನ್ನು ಯಾರೂ ಕೂಡ ಮಾಡಬಾರದು, ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು, ಅಳವಡಿಸಿಕೊಳ್ಳಬಾರದು. ಇದು ನಿಮಗೆ ಖಂಡಿತಾ ಶೋಭೆ ತರುವುದಿಲ್ಲ. ಇಂತಹ ಲಜ್ಜಾಸ್ಪದ ರಾಜಕೀಯದ ಮುಖವಾಡಗಳನ್ನು ನಾನು ಧಿಕ್ಕರಿಸುತ್ತೇನೆ. ಈ ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಆಗ್ರಹಿಸುತ್ತೇನೆ. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.