ಬೆಳಗಾವಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ನನ್ನ ಕೈತಪ್ಪುವಂತೆ ಮಾಡುವ ನಿಟ್ಟಿನಲ್ಲಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಚಿಕ್ಕಮಗಳೂರು ಭಾಗದಲ್ಲಿ ಗೋಬ್ಯಾಕ್ ಅಭಿಯಾನ, ಸಹಿ ಸಂಗ್ರಹ ಅಭಿಯಾನ ನಡೆಸುವ ಮೂಲಕ ಬಿಜೆಪಿ ಕಾರ್ಯಕರ್ತರೇ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ನಡುವೆ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ, ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದಿದ್ದಾರೆ.
ಯಾವಾಗ ವಿರೋಧ ವ್ಯಕ್ತವಾಗುತ್ತದೆಯೋ ಆಗಲೇ ನಮ್ಮ ನಾಯಕರು ನಮ್ಮ ಬಗ್ಗೆ ಮಾಹಿತಿ ಕಲೆಹಾಕುತ್ತಾರೆ. ನಮ್ಮವರು ವಿರೋಧ ಮಾಡಿದ ಕಾರಣಕ್ಕೆ ನನಗೆ ಅನುಕೂಲ ಆಗಿದೆ. ಇಲ್ಲವಾದರೆ ಶೋಭಾ ಒಳ್ಳೆಯ ಕೆಲಸ ಮಾಡಿದ್ದಾರೆ ಪಕ್ಷದ ಕೆಲಸ ಮಾಡಿದ್ದಾರೆ ಎಂದಷ್ಟೇ ಹೇಳುತ್ತಿದ್ದರು. ಈಗ ಶೋಭಾ ಅವರನ್ನು ಯಾಕೆ ವಿರೋಧ ಮಾಡುತ್ತಿದ್ದಾರೆ ಎಂಬುದನ್ನು ಪಕ್ಷದ ನಾಯಕರು ಮಾಹಿತಿ ಕಲೆ ಹಾಕಿದ್ದಾರೆ. ಆಗಲೇ ಸತ್ಯ ಗೊತ್ತಾಗುವುದು. ನಮ್ಮ ವ್ಯಕ್ತಿತ್ವ ಏನು? ನಮ್ಮ ಅಭಿವೃದ್ಧಿ ಕೆಲಸಗಳೇನು? ಎಂಬುದು ತಿಳಿಯುತ್ತದೆ.
ಚುನಾವಣೆಯ ಸಂದರ್ಭ ಬಹಳ ಸೂಕ್ಷ್ಮತೆಯಿಂದ ಕೂಡಿರುತ್ತದೆ. ಮಾಹಿತಿ ಕಲೆಹಾಕುವುದರಿಂದ ನನಗೆ ಒಳ್ಳೆಯದೇ ಆಗುತ್ತದೆ ಹೊರತು ಕೆಟ್ಟದ್ದಾಗಲ್ಲ. ನಮ್ಮ ಹೈಕಮಾಂಡ್ ಮೇಲೆ ನನಗೆ ನಂಬಿಕೆ ಇದೆ. ಕೆಲಸದ ಆಧಾರದ ಮೇಲೆ ಟಿಕೆಟ್ ಸಿಗುತ್ತದೆ ಎಂದು ತಿಳಿಸಿದ್ದಾರೆ.