ಬೆಂಗಳೂರು: ನಾಗಮಂಗಲ ಗಲಭೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕೆ ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿರುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವೆ ಶೋಭಾಕರಂದ್ಲಾಜೆ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಮೇಲೆ ಹಿಟ್ಲರ್ ಆಗಿದ್ದಾರೆ. ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕರಾದ ಹರೀಶ್ ಪೂಂಜ, ತೇಜಸ್ವಿ ಸೂರ್ಯ ಸೇರಿದಂತೆ ಹಲವರ ಮೇಲೆ ಕೇಸ್ ದಾಖಲಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ಐವನ್ ಡಿಸೋಜಾ ನೀಡಿದ ಹೇಳಿಕೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸ್ ಅಧಿಕಾರಿ ಪರಶುರಾಮ್ ಆತ್ಮಹತ್ಯೆ ಮಾಡಿಕೊಂಡರೂ ಕಾಂಗ್ರೆಸ್ ಶಾಸಕನ ವಿರುದ್ಧ ಕ್ರಮ ಆಗಿಲ್ಲ. ಮಾಜಿ ಸಚಿವ ಹಗರಣಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಎಸ್ಐಟಿ ಚಾರ್ಜ್ ಶೀಟ್ ನಲ್ಲಿ ಅವರ ಹೆಸರೇ ಇಲ್ಲ. ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.
ಗಣೇಶ ಮೂರ್ತಿಯನ್ನು ಪೊಲೀಸ್ ವ್ಯಾನ್ ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಗಣಪತಿಗೇ ವಿಘ್ನ ಮಾಡಿದ್ದಾರೆ. ಇಂತಹ ಘಟನೆ ದೇಶದಲ್ಲೇ ಮೊದಲು. ನಾಗಮಂಗಲದಲ್ಲಿ ಗಲಭೆಯಾಗಿದೆ. 25 ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಕೇರಳದವರು ಎನ್ನುತ್ತಿದ್ದಾರೆ. ಅವರಿಗೆ ಶಕ್ತಿ ಎಲ್ಲಿಂದ ಬಂತು? ಕೋಲಾರದಲ್ಲಿ ಪ್ಯಾಲೆಸ್ಟೈನ್ ಧ್ವಜ ಪ್ರದರ್ಶನ ಆಗಿದೆ. ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ರಾಷ್ಟ್ರಧ್ವಜದ ಮೇಲೆ ಉರ್ದುವಿನಲ್ಲಿ ಬರೆದಿದ್ದಾರೆ. ಇದು ಕರ್ನಾಟಕದ ಸ್ಥಿತಿ. ಈ ಧೈರ್ಯ ಸಮಾಜ ದ್ರೋಹಿಗಳಿಗೆ ಎಲ್ಲಿಂದ ಬಂತು? ಇದನ್ನು ಪ್ರಶ್ನಿಸಿದ್ದಕ್ಕೆ ಸರ್ಕಾರ ನನ್ನ ಮೇಲೆ ಎಫ್ಐಆರ್ ಹಾಕಿದೆ. ಪೊಲೀಸರು ನನ್ನನ್ನು ಬಂಧಿಸಬಹುದು. ಇದಕ್ಕೆಲ್ಲ ಹೆದರುವವರು ನಾವಲ್ಲ. ಎಲ್ಲವನ್ನು ಎದುರಿಸುತ್ತೇನೆ ಎಂದಿದ್ದಾರೆ.