ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿ.ಎಲ್. ಸಂತೋಷ್ ಎಂದಿಗೂ ಜಗದೀಶ್ ಶೆಟ್ಟರ್ ವಿರೋಧಿಯಾಗಿರಲಿಲ್ಲ. ಸಂತೋಷ್ ಶಾಸಕರಲ್ಲ, ಸಂಸದರಲ್ಲ, ಚುನಾವಣೆಗೆ ನಿಲ್ಲುವವರಲ್ಲ, ಇಷ್ಟು ವರ್ಷಗಳ ಕಾಲ ಬಿ.ಎಲ್. ಸಂತೋಷ್ ಕೆಲಸ ಮಾಡಿರುವುದು ಪಕ್ಷ ಸಂಘಟನೆಗಾಗಿ. ಅವರು ಒಂದು ವಿಚಾರಧಾರೆಯಿಂದ ಬಂದವರಾಗಿದ್ದಾರೆ. ಆ ವಿಚಾರದಿಂದ ಬಂದವರನ್ನು ಗೆಲ್ಲಿಸಬೇಕು ಎನ್ನುವುದು ಅವರ ಉದ್ದೇಶವಾಗಿದೆ ಎಂದರು.
ಕೇವಲ ಶಾಸಕ ಸ್ಥಾನಕ್ಕಾಗಿ ಶೆಟ್ಟರ್ ಕಾಂಗ್ರೆಸ್ ಸೇರಿದ್ದು ಎಷ್ಟು ಸರಿ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ವಿರೋಧಿಸುತ್ತಿದ್ದವರೇ ಈಗ ಆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಧ್ವಜ ಬದಲಾದಂತೆ ಆಲೋಚನೆಗಳು ಬದಲಾಗುತ್ತವೆಯೇ? ಶೆಟ್ಟರ್ ಕಾಂಗ್ರೆಸ್ ಸೇರಿರುವುದು ಬೇಸರ ತಂದಿದೆ. ಹುಬ್ಬಳ್ಳಿ -ಧಾರವಾಡ ಸೆಂಟ್ರಲ್ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಅಲ್ಲಿ ಕಾಂಗ್ರೆಸ್ ಗೆಲ್ಲುವುದಿಲ್ಲ. ಚುನಾವಣೆಯಲ್ಲಿ ಶೆಟ್ಟರ್ ಅವರಿಗೆ ಜನರು ತಕ್ಕ ಪಾಠ ಕಲಿಸುತ್ತಾರೆ. ಪಕ್ಷ ಬಿಟ್ಟವರು ಎಂದು ಗೆಲ್ಲಲಾಗಲ್ಲವೆಂದು ಶೆಟ್ಟರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.