
ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಒಂದೆಡೆ ಟಿಕೆಟ್ ಆಕಾಂಕ್ಷಿಗಳ ಲಾಭಿ ಜೋರಾಗಿದೆ. ಇನ್ನೊಂದೆಡೆ ಹಾಲಿ ಸಂಸದರ ವಿರುದ್ಧವೇ ಕಾರ್ಯಕರ್ತರು ಸಿಡಿದೆದ್ದಿರುವ ಘಟನೆ ನಡೆದಿದೆ.
ಕೇಂದ್ರ ಸಚಿವೆ, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧವೇ ಬಿಜೆಪಿ ಕಾರ್ಯಕರ್ತರು ತಿರುಗಿ ಬಿದ್ದಿದ್ದಾರೆ. ಈ ಬಾರಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡದಂತೆ ಪತ್ರ ಅಭಿಯಾನ ಆರಂಭಿಸಿದ್ದಾರೆ.
ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ, ಕೇಂದ್ರ ಸಚಿವರಾಗಿದ್ದರೂ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಸ್ವಕ್ಷೇತ್ರದ ಕಾರ್ಯಕರ್ತರೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಬಾರಿ ಲೋಕಸಭಾ ಚುನಾವಣೆಗೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನಿಡಬಾರದು ಎಂದು ಆಗ್ರಹಿಸಿ ಪತ್ರ ಅಭಿಯಾನ ನಡೆಸಿರುವ ಕಾರ್ಯಕರ್ತರು 5000 ಪತ್ರಗಳನ್ನು ಸಗ್ರಹಿಸಿದ್ದಾರೆ. ಹೀಗೆ ಬರೆದ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ವರಿಷ್ಠರಿಗೆ ರವಾನಿಸಲು ಮುಂದಾಗಿದ್ದಾರೆ.