ನವದೆಹಲಿ: ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಿಸುವ ಸಾಧ್ಯತೆ ದಟ್ಟವಾಗಿದೆ.
ಹಾಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆ.ಪಿ. ನಡ್ಡಾ ಅವರ ಅಧಿಕಾರದ ಅವಧಿ ತಿಂಗಳಾಂತ್ಯಕ್ಕೆ ಮುಕ್ತಾಯವಾಗಲಿದೆ. ಮಧ್ಯಪ್ರದೇಶದ ವಿದಿಶಾ ಲೋಕಸಭಾ ಕ್ಷೇತ್ರದಿಂದ ಸುಮಾರು 8 ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿ ಸಂಸತ್ತಿಗೆ ಆಯ್ಕೆಯಾಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯದ 29 ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. 4 ತಿಂಗಳ ಹಿಂದಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿಯೂ ಬಿಜೆಪಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಹೀಗಾಗಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಗಂಭೀರ ಚಿಂತನೆ ನಡೆದಿದೆ.
ಪಕ್ಷ ಸಂಘಟನೆಯಲ್ಲಿ ಪಳಗಿರುವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಲು ಹಿರಿಯ ನಾಯಕರು ಚಿಂತನೆ ನಡೆಸಿದ್ದಾರೆ. ಆದರೆ, ಮೋದಿ 3.0 ಸಚಿವ ಸಂಪುಟದಿಂದ ದೂರ ಇಡಲು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನ ನೀಡಲಾಗುತ್ತಿದೆ ಎಂದು ಕೂಡ ಹೇಳಲಾಗಿದೆ.
ಮಧ್ಯಪ್ರದೇಶದ ಪ್ರಭಾವಿ ನಾಯಕ ಶಿವರಾಜ್ ಸಿಂಗ್ ಚೌಹಾಣ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಹುದ್ದೆಗೇರಲು ಸಜ್ಜಾಗಿದ್ದರೂ ಅವಕಾಶ ತಪ್ಪಿಸಲಾಯಿತು. ಇದೀಗ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ಚೌಹಾಣ್ ಇನ್ನೇನು ಮೋದಿ ಸಂಪುಟಕ್ಕೆ ಸೇರಲಿದ್ದಾರೆ ಎನ್ನುತ್ತಿರುವಾಗಲೇ ಸಂಪುಟದಿಂದ ದೂರವಿಡಲು ಪಕ್ಷದ ಜವಾಬ್ದಾರಿ ನೀಡಲಾಗುತ್ತಿದೆ ಎನ್ನಲಾಗಿದೆ.