alex Certify ಪ್ರಸಿದ್ಧ ನಂದಿ ಕ್ಷೇತ್ರದಲ್ಲಿ ಶಿವೋತ್ಸವಕ್ಕೆ ಸಕಲ ಸಿದ್ಧತೆ: ರಾಜ್ಯಪಾಲರಿಂದ ಚಾಲನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಸಿದ್ಧ ನಂದಿ ಕ್ಷೇತ್ರದಲ್ಲಿ ಶಿವೋತ್ಸವಕ್ಕೆ ಸಕಲ ಸಿದ್ಧತೆ: ರಾಜ್ಯಪಾಲರಿಂದ ಚಾಲನೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ತಾಲ್ಲೂಕಿನ ಪ್ರಸಿದ್ಧ ನಂದಿ ಕ್ಷೇತ್ರದಲ್ಲಿ ಮಾರ್ಚ್ 1 ರಂದು ನಡೆಯಲಿರುವ ಚೊಚ್ಚಲ ಶಿವೋತ್ಸವ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಅವರು ವಿದ್ಯುಕ್ತವಾಗಿ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.

ನಂದಿಯ ಶಿವೋತ್ಸವ ಮತ್ತು ಜಾತ್ರಾ ಮಹೋತ್ಸವ ಕುರಿತು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕಕ್ಕೆ “ಒಂದು ರಾಜ್ಯ ಹಲವಾರು ಜಗತ್ತುಗಳು” ಎಂಬ ಹೆಸರಿದೆ. ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತ್ಯಂತ ಒಳ್ಳೆಯ ಪ್ರವಾಸಿ ತಾಣಗಳು, ಪ್ರಸಿದ್ದ ದೇವಾಲಯಗಳು, ನದಿ, ಸರೋವರಗಳು, ಪಂಚಗಿರಿಗಳು ಹಾಗೂ   ಎಲ್ಲಕ್ಕಿಂತ ಮಿಗಿಲಾಗಿ ಒಳ್ಳೆಯ ಐತಿಹಾಸಿಕ ಹಿನ್ನೆಲೆ ಮತ್ತು ಪರಂಪರೆ ನಂದಿ ಮಹಾಕ್ಷೇತ್ರಕ್ಕೆ ಇದೆ. ಚಿಕ್ಕಬಳ್ಳಾಪುರ ಜಿಲ್ಲೆಯನ್ನು “ಒಂದು ಜಿಲ್ಲೆ ಹಲವಾರು ಜಗತ್ತುಗಳು” ಎಂದು ಕರೆಯಬಹುದು. ಈ ಹಿನ್ನೆಲೆಯಲ್ಲಿ ಮಹಾಶಿವರಾತ್ರಿಯನ್ನು ನಂದಿ ಮಹಾಕ್ಷೇತ್ರದಲ್ಲಿ ವೈಭವವಾಗಿ ಮತ್ತು ವಿಭಿನ್ನವಾಗಿ 2021 -22 ನೇ ಸಾಲಿನ ಚೊಚ್ಚಲ ಶಿವೋತ್ಸವ ಮತ್ತು ಜಾತ್ರಾ ಮಹೋತ್ಸವವನ್ನು ಜಿಲ್ಲಾಡಳಿತ ವತಿಯಿಂದ ಹಾಗೂ ಸುಧಾಕರ್ ಫೌಂಡೇಶನ್ ಮತ್ತು ಸ್ಥಳೀಯ ಮುಖಂಡರ ಸಹಯೋಗದಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಭೋಗನಂದೀಶ್ವರ ದೇವಸ್ಥಾನ ಬಹಳ ಪ್ರಾಚೀನವಾದ ದೇವಸ್ಥಾನವಾಗಿದ್ದು, ಇಲ್ಲಿ ಗಂಗರು ಚೋಳರು,  ಚಾಲುಕ್ಯರು, ಹೊಯ್ಸಳರು ಮತ್ತು ವಿಜಯನಗರ ಸಾಮ್ರಾಜ್ಯದ ಅರಸರು  ಹೀಗೆ 5 ರಾಜಮನೆತನಗಳು ದೇವಸ್ಥಾನದ ಅಭಿವೃದ್ಧಿಕಾರ್ಯಗಳನ್ನು ಕೈಗೊಂಡಿರುವಂತಹ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದೆ. ಈ ಪುಣ್ಯಕ್ಷೇತ್ರದಲ್ಲಿ ಶಿವನ ಬಾಲ್ಯ, ಯವ್ವನ, ಗೃಹಸ್ಥ ವೃದ್ಧಾಪ್ಯವನ್ನು ಪ್ರತಿಬಿಂಬಿಸುವ ಅರುಣಾಚಲ, ಭೋಗನಂದೀಶ್ವರ, ಉಮಾಮಹೇಶ್ವರ ಯೋಗನಂದೀಶ್ವರ ದೇವಸ್ಥಾನಗಳು ಒಂದೆಡೆ ಇವೆ. ಇಂತಹ ವಿಶೇಷತೆಯನ್ನು ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಮೈಸೂರಿನ ದಸರಾ ಮತ್ತು ಹಂಪಿಯ ಉತ್ಸವದ ರೀತಿಯಲ್ಲಿ ನಂದಿಯಲ್ಲಿ ಶಿವೋತ್ಸವ ಮತ್ತು ಜಾತ್ರಾಮಹೋತ್ಸವವನ್ನು ಮುಂದಿನ ವರ್ಷದಿಂದ ಸರ್ಕಾರಿ ಕಾರ್ಯಕ್ರಮವಾಗಿ ರೂಪುಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಈ ವರ್ಷದಿಂದ ಪ್ರಾಯೋಗಿಕವಾಗಿ ಚೊಚ್ಚಲ ನಂದಿ ಶಿವೋತ್ಸವ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಸಲಾಗಿದೆ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿ, ಸಕಲ ಸಿದ್ಧತೆಯ ಕಾರ್ಯಗಳನ್ನು ಸಮರ್ಪಕವಾಗಿ ಮಾಡಿಕೊಂಡಿದೆ ಎಂದು ತಿಳಿಸಿದರು.

ಮಹಾಶಿವರಾತ್ರಿ ದಿನ ನಂದೀ ಕ್ಷೇತ್ರದಲ್ಲಿ ವಿಭಿನ್ನ ಮತ್ತು ವೈಭವದ ಶಿವೋತ್ಸವ ಆಚರಿಸಿ ಇಡೀ ಜಿಲ್ಲೆಯ ಹಾಗೂ ನಾಡಿನ ಜನತೆಗೆ ಶಿವನ ಅನುಗ್ರಹ ಸಿಗಬೇಕೆನ್ನುವ ಆಶಯದಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಪ್ರಮುಖ ಜನಪ್ರತಿನಿಧಿಗಳು, ಜಿಲ್ಲೆಯ ಜನಪ್ರತಿನಿಧಿಗಳು, ಸಿನಿಮಾ ತಾರೆಯರು, ಖ್ಯಾತ ಕಲಾವಿದರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ ಎಂದರು.

 ಶಿವೋತ್ಸವ ಕೂಡ ಖ್ಯಾತಿ ಪಡೆಯಲಿದೆ

ರಾಜ್ಯದಲ್ಲಿ ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ದಸರಾ ಆಚರಣೆಗೆ ಪ್ರಸಿದ್ಧಿ ಹೊಂದಿದ್ದರೆ, ಹಂಪಿ ಕೂಡ ಹಂಪಿ ಉತ್ಸವಕ್ಕೆ ಜನಪ್ರಿಯತೆ ಪಡೆದಿದೆ. ಬೆಂಗಳೂರಿನಲ್ಲಿ ಕರಗ ಉತ್ಸವ ವಿಶ್ವಖ್ಯಾತಿ ಪಡೆದಿದೆ. ಈ ವರ್ಷದಿಂದ ಆರಂಭವಾಗುವ ಶಿವೋತ್ಸವ ಕೂಡ ಇದೇ ರೀತಿಯ ಖ್ಯಾತಿಯನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅನೇಕ ಸಂತರು, ಗುರುಗಳು ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಸಿರಿಗೆರೆಯ ಮಹಾಸ್ವಾಮಿಗಳು, ಸತ್ಯ ಸಾಯಿ ಸಂಸ್ಥೆಯ ಶ್ರೀ ಮಧುಸೂದನ್ ಗುರುಗಳು ಕೂಡ ಶಿವೋತ್ಸವಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.

ಶಿವರಾತ್ರಿಯಂದು ಮಾರ್ಚ 1 ರ ಸಂಜೆ 6 ಗಂಟೆಗೆ ಆರಂಭವಾಗಿ, ಬೆಳಗ್ಗೆ ರಥೋತ್ಸವ ನಡೆಯುವ ತನಕ ನಿರಂತರವಾಗಿ ಸಾಂಸ್ಕೃತಿಕ, ಭಕ್ತಿ ಹಾಗೂ ಜಾಗರಣೆ ಕಾರ್ಯಕ್ರಮಗಳು ನಡೆಯಲಿವೆ.  ರಾಷ್ಟ್ರೀಯ ಮಟ್ಟದ ಸಂಗೀತ, ನಾಟ್ಯ ಕಲಾವಿದರು, ಚಿತ್ರ ತಾರೆಯರು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ. ಖ್ಯಾತ ಗಾಯಕಿ ಅನನ್ಯ ಭಟ್, ಸಂಗೀತಗಾರ ರಘು ದೀಕ್ಷಿತ್, ನಾಟ್ಯ ಕಲಾವಿದೆ ಲಕ್ಷ್ಮೀ ಗೋಪಾಲಸ್ವಾಮಿ ಸೇರಿದಂತೆ ಸುಮಾರು 25 ಹೆಸರಾಂತ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಪ್ರೊ. ಕೃಷ್ಣೆಗೌಡರಿಂದ ನಗೆ ಹಬ್ಬ ಕೂಡ ಇರಲಿದೆ.  ಜಾನಪದ ಕಲೆಗಳು, ಭರತ ನಾಟ್ಯ ಕೂಡ ಆಕರ್ಷಣೆಯಾಗಿರಲಿದೆ. ಮಧ್ಯಾಹ್ನ 1 ಗಂಟೆಯಿಂದ ಹಿಡಿದು, ಮುಂದಿನ ದಿನ ರಥೋತ್ಸವ ಆಗುವ ತನಕ ನಿರಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.

 ನಂದಿ ಬೆಟ್ಟಕ್ಕೆ ಲೇಸರ್ ಶೋ

ನಂದಿ ಬೆಟ್ಟದಲ್ಲಿ ದೀಪಾಲಂಕಾರ ಮಾಡಲಾಗುತ್ತದೆ. ಬೆಟ್ಟದಲ್ಲಿ ಲೇಸರ್ ಶೋ ಇರಲಿದೆ. ಸುಮಾರು  2 ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. 20 ರಿಂದ 25 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. 3 ಸಾವಿರ ಫೋರ್ ವ್ಹೀಲರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 5 ಸಾವಿರ ದ್ವಿಚಕ್ರವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಲಾಗುವುದು. ಊಟದ ವ್ಯವಸ್ಥೆಗೆ 25 ರಿಂದ 30 ಕೌಂಟರ್ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ವಿವರಿಸಿದರು. ದೇವಾಸ್ಥಾನದ ಆವರಣದಲ್ಲಿ 25 ರಿಂದ 40 ಮಳಿಗೆಗಳು ಸ್ಥಳೀಯ ವಸ್ತುಗಳ ಪ್ರದರ್ಶನಕ್ಕೆ ಸೀಮಿತವಾಗಿರಲಿದೆ. ಜಿಲ್ಲೆಯ ವಿಶೇಷತೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...