ಚಿಕ್ಕಬಳ್ಳಾಪುರ: ನಮ್ಮ ಭಾರತೀಯ ಸಂಸ್ಕೃತಿಯು ಯಾವಾಗಲೂ ವಿಶ್ವ ಭ್ರಾತೃತ್ವ, ವಿಶ್ವ ಶಾಂತಿ, ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ. ಪ್ರತಿಯೊಬ್ಬರು ನಮ್ಮ ಸಂಸ್ಕೃತಿ ಅಳವಡಿಸಿಕೊಳ್ಳುವ ಮೂಲಕ ಲೋಕ ಕಲ್ಯಾಣಕ್ಕೆ ಕೈಜೋಡಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ಅವರು ಕರೆ ನೀಡಿದರು.
ಚಿಕ್ಕಬಳ್ಳಾಪುರದ ನಂದಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶಿವೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ತತ್ತ್ವಶಾಸ್ತ್ರ, ಧರ್ಮ-ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿ ಬಹಳ ಪುರಾತನವಾಗಿದ್ದು, ಇಂದಿಗೂ ಪ್ರಸ್ತುತವಾಗಿವೆ, ಅವುಗಳನ್ನು ಅಳವಡಿಸಿಕೊಳ್ಳುವ ಮೂಲಕ ಯುವಪೀಳಿಗೆ ಲೋಕಕಲ್ಯಾಣದ ದಿಕ್ಕಿನಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಇಂದು ದೇಶ ಮತ್ತು ವಿಶ್ವದಲ್ಲಿ ಮಹಾಶಿವರಾತ್ರಿ ಮಹಾಪರ್ವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ತಾಯಿ ಪಾರ್ವತಿ ಮತ್ತು ಭಗವಾನ್ ಶಿವನ ವಿವಾಹದ ದಿನಾಂಕವಾಗಿ ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಅದಕ್ಕಾಗಿಯೇ ಈ ದಿನಾಂಕವನ್ನು “ಮಹಾಶಿವರಾತ್ರಿ” ಎಂದು ಕರೆಯಲಾಗುತ್ತದೆ.
ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುವ ಸಾಧಕರಿಗೆ ಮಹಾಶಿವರಾತ್ರಿಯು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಧಕರು ಮಹಾಶಿವರಾತ್ರಿಯನ್ನು ಸ್ಥಿರತೆಯ ರಾತ್ರಿ ಎಂದೂ ಆಚರಿಸುತ್ತಾರೆ.
ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ದೇಶಕ್ಕೆ ಹಾಗೂ ಜನರಿಗೆ ಹಿತ ನೀಡಿ, ಸರ್ವರನ್ನು ಕಾಪಾಡಲಿ, ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ನಾನು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯವನು. ಉಜ್ಜಯಿನಿಯಲ್ಲಿ 12 ಲಿಂಗಗಳಲ್ಲಿ ಒಂದಾದ ಮಹಾಕಾಲ ಲಿಂಗೇಶ್ವರ ದೇವಾಲಯವಿದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಉಜ್ಜಯಿನಿಯಲ್ಲಿ “ಶಿವಜ್ಯೋತಿ ಅರ್ಪಣಂ ಮಹೋತ್ಸವ”ವನ್ನು ಆಚರಿಸಲಾಗುತ್ತಿದೆ. ಈ ದಿನದಂದು ನಗರದಾದ್ಯಂತ 21 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತದೆ. ಈ ಬಾರಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಶಿವೋತ್ಸವದಲ್ಲಿ ಪಾಲ್ಗೊಂಡು ಅತ್ಯಂತ ಸಂತೃಪ್ತನಾಗಿದ್ದೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ಇಂದು ಧಾರ್ಮಿಕ, ಸಾಂಸ್ಕೃತಿಕ ಪುನರುಜ್ಜೀವನದ ಅವಶ್ಯಕತೆಯಿದೆ ಮತ್ತು ಅದರ ಜವಾಬ್ದಾರಿ ನಮ್ಮ ಯುವ ಪೀಳಿಗೆಯ ಮೇಲಿದೆ. ಯುವಕರು ಧರ್ಮ-ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಜಗತ್ತಿನಲ್ಲಿ ವಿಸ್ತರಿಸಲು ಶ್ರಮಿಸಲಿ ಎಂದರು.
ಸಚಿವರಾದ ಡಾ. ಕೆ ಸುಧಾಕರ್ ಫೌಂಡೇಶನ್ ಮತ್ತು ಜಿಲ್ಲಾಡಳಿತವು ನಂದಿ ಬೆಟ್ಟದಲ್ಲಿ ಮಹಾಶಿವರಾತ್ರಿ ಮಹಾಪರ್ವದಂದು ಶಿವೋತ್ಸವ-2022 ರ ಅದ್ದೂರಿ ಆಚರಣೆಯನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿರಿಗೆರೆ ಪರಮಪೂಜ್ಯ ಸ್ವಾಮೀಜಿ ಶಿವಮೂರ್ತಿ ಶಿವಾಚಾರ್ಯರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ನಾರಾಯಣಸ್ವಾಮಿ, ಸಚಿವರಾದ ಡಾ.ಕೆ. ಸುಧಾಕರ್, ಎಂಟಿಬಿ ನಾಗರಾಜ್, ಬೈರತಿ ಬಸವರಾಜ್ ಮೊದಲಾದವರಿದ್ದರು.