ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲಾ ಪೊಲೀಸರು ಗುರುವಾರ ಶಿವಲಿಂಗವನ್ನು ಕದ್ದ ಆರೋಪದ ಮೇಲೆ ಎಂಟು ಜನರನ್ನು ಬಂಧಿಸಿದ್ದಾರೆ. ಸಮೃದ್ಧಿಯನ್ನು ತರುತ್ತದೆ ಎಂಬ ನಂಬಿಕೆಯಿಂದ ಸುಮಾರು 500 ಕಿ.ಮೀ ದೂರದ ಉತ್ತರ ಗುಜರಾತ್‌ನ ಸಬರಕಾಂತ ಜಿಲ್ಲೆಯ ತಮ್ಮ ಮನೆಯಲ್ಲಿ ಅದನ್ನು ಪ್ರತಿಷ್ಠಾಪಿಸಿದ್ದರು.
ದ್ವಾರಕಾದ ಹರ್ಷದ್ ಗ್ರಾಮದ ಕರಾವಳಿಯಲ್ಲಿರುವ ಶ್ರೀ ಭಿದ್‌ಭಂಜನ್ ಭಾವನೇಶ್ವರ ಮಹಾದೇವ ದೇವಾಲಯದ ಶಿವಲಿಂಗದ ಬಗ್ಗೆ ಶಂಕಿತರ ಸಂಬಂಧಿಕರಲ್ಲಿ ಒಬ್ಬರು ಕನಸು ಕಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಈ ದೇವಾಲಯವು ಹರ್ಷಿದ್ಧಿ ಮಾತಾಜಿಯ ಪ್ರಸಿದ್ಧ ಯಾತ್ರಾ ಸ್ಥಳಕ್ಕೆ ಸಮೀಪದಲ್ಲಿದೆ, ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಕಲ್ಲುಗಳಿಂದ ಮಾಡಿದ ಶಿವಲಿಂಗವನ್ನು ಕದ್ದ ಅಪರಿಚಿತ ಶಂಕಿತರ ವಿರುದ್ಧ ಮಂಗಳವಾರ ದೇವಾಲಯದ ಅರ್ಚಕರು ಎಫ್‌ಐಆರ್ ದಾಖಲಿಸಿದ್ದರು. ಬೇರೇನೂ ಕಳವಾಗಿಲ್ಲ ಮತ್ತು ವಿಗ್ರಹದ ತಳವು ದಡದಲ್ಲಿ ಬಿದ್ದಿರುವುದನ್ನು ಕಂಡೆ ಎಂದು ಅರ್ಚಕರು ಪೊಲೀಸರಿಗೆ ತಿಳಿಸಿದ್ದರು. ಎಫ್‌ಐಆರ್ ನಂತರ, ಜಿಲ್ಲಾ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ಸ್ಕೂಬಾ ಡೈವರ್‌ಗಳಿಂದ ಸಹಾಯವನ್ನು ಕೋರಿದ್ದರು. ಆದರೆ ವಿಗ್ರಹವನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತೇಶ್ ಪಾಂಡೆ, ಮಾನವ ಮತ್ತು ತಾಂತ್ರಿಕ ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಸಬರಕಾಂತ ಜಿಲ್ಲೆಯ ಹಿಮ್ಮತ್‌ನಗರದಲ್ಲಿ ಶಂಕಿತರನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. “ಕಳ್ಳತನದಲ್ಲಿ ಮೂವರು ಮಹಿಳೆಯರು ಸೇರಿದಂತೆ 11 ಜನರ ಕೈವಾಡವನ್ನು ನಾವು ಕಂಡುಕೊಂಡಿದ್ದೇವೆ. ಅವರೆಲ್ಲರೂ ಒಂದೇ ಕುಟುಂಬದ ಭಾಗವಾಗಿದ್ದಾರೆ” ಎಂದು ಅವರು ಹೇಳಿದರು.
“ಶಿವಲಿಂಗವನ್ನು ಮನೆಯಲ್ಲಿ ಇರಿಸಿದರೆ, ಅದು ಸಮೃದ್ಧಿಯನ್ನು ತರುತ್ತದೆ ಎಂಬ ಕುಟುಂಬದ ಇಬ್ಬರು ಸದಸ್ಯರು ಕಂಡ ಕನಸು, ಕಳ್ಳತನದ ಹಿಂದಿನ ಕಾರಣವಾಗಿದೆ” ಎಂದು ಪಾಂಡೆ ಹೇಳಿದ್ದಾರೆ.
ವಿವಿಧ ಸುಳಿವುಗಳು ಉತ್ತರ ಗುಜರಾತ್‌ನ ಸಬರಕಾಂತ ಜಿಲ್ಲೆಯ ಹಿಮ್ಮತ್‌ನಗರಕ್ಕೆ ಪೊಲೀಸರನ್ನು ಕರೆದೊಯ್ದಿದ್ದು, ಅಲ್ಲಿ ಅವರು ಶಂಕಿತರನ್ನು ಬಂಧಿಸಿ ಶಿವಲಿಂಗವನ್ನು ವಶಪಡಿಸಿಕೊಂಡರು.ದೇವಭೂಮಿ ದ್ವಾರಕಾದ ದೇವಾಲಯಕ್ಕೆ ವಿಗ್ರಹವನ್ನು ಹಿಂತಿರುಗಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ, ಇದು ಸೌರಾಷ್ಟ್ರದಲ್ಲಿ ಸುಮಾರು 500 ಕಿ.ಮೀ ದೂರದಲ್ಲಿದೆ.
ಬಂಧಿತರನ್ನು ಮಹೇಂದ್ರ ಮಕ್ವಾನ, ಜಗತ್ಸಿಂಗ್ ಮಕ್ವಾನ, ಮನೋಜ್ ಮಕ್ವಾನ, ವನರಾಜ್ಸಿಂಗ್ ಮಕ್ವಾನ, ರಮೇಶ್ ಮಕ್ವಾನ, ಹರೇಶ್ ಮಕ್ವಾನ ಮತ್ತು ಅಶೋಕ್ ಮಕ್ವಾನ ಎಂದು ಗುರುತಿಸಲಾಗಿದೆ.
ಮಹಾಶಿವರಾತ್ರಿಯ ಹಿಂದಿನ ದಿನ ಶಿವಲಿಂಗ ಕಳ್ಳತನ ನಡೆದಿದ್ದರಿಂದ ಜಿಲ್ಲಾಡಳಿತ ತಲ್ಲಣಗೊಂಡಿತ್ತು. ಈಗ ಕಳ್ಳತನದ ಹಿಂದಿನ ಕಾರಣ ಬಯಲಾಗಿದ್ದು ಹಾಗೂ ಆರೋಪಿಗಳ ಪತ್ತೆ ಬಳಿಕ ನೆಮ್ಮದಿಗೊಂಡಿದೆ.