ಬೆಂಗಳೂರು: ವಲಸೆ ಕಾರ್ಮಿಕರಿಗೆ ಅನುಕೂಲವಾಗುವಂತೆ ರಾಜ್ಯದ 7 ಸ್ಥಳಗಳಲ್ಲಿ ಟ್ರಾನ್ಸಿಟ್ ಮನೆಗಳ ನಿರ್ಮಿಸಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ಸಲೀಂ ಅಹಮದ್ ಅವರ ಪರವಾಗಿ ಕೆ. ಗೋವಿಂದರಾಜು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಹೆಬ್ಬಾರ್, ಬೆಂಗಳೂರು, ಶಿವಮೊಗ್ಗ, ಚಾಮರಾಜನಗರ, ಬೆಳಗಾವಿ ಸೇರಿದಂತೆ ರಾಜ್ಯದ 7 ಸ್ಥಳಗಳಲ್ಲಿ ಟ್ರಾನ್ಸಿಟ್ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ವಲಸೆ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.
ವಲಸೆ ಕಾರ್ಮಿಕರಿಗಾಗಿ ಸಹಾಯವಾಣಿ ಆರಂಭಿಸಿದ್ದು, ಕರೆ ಮಾಡಿದವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡಲಾಗುತ್ತಿರುವ ಶೈಕ್ಷಣಿಕ ಸಹಾಯಧನದ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ. 750 ಮಂದಿಗೆ ಐಎಎಸ್, ಕೆಎಎಸ್ ತರಬೇತಿ ಕೊಡಿಸಿದ್ದು, ತಲಾ 6 ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ. ಐಐಎಂ, ಐಐಟಿ, ಎನ್ಐಟಿಗೆ ಆಯ್ಕೆಯಾದವರ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಮಂಡಳಿಯಿಂದಲೇ ಭರಿಸಲಾಗುತ್ತಿದೆ. 35 ವಿದ್ಯಾರ್ಥಿಗಳಿಗೆ ತಲಾ 38 ಲಕ್ಷ ರೂ. ವೆಚ್ಚದಲ್ಲಿ ಪೈಲಟ್ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.