ಶಿವಮೊಗ್ಗ: ಕಾರ್ಮಿಕರ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕಾರ್ಮಿಕ ಇಲಾಖೆಯಿಂದ 750 ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ನೋಂದಾಯಿತ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರು ಮತ್ತು ಅವಲಂಬಿತರಿಗೆ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಆರೋಗ್ಯ ತಪಾಸಣೆ, ತರಬೇತಿ, ಸಂಚಾರಿ ಆರೋಗ್ಯ ಕ್ಲಿನಿಕ್ ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 600 ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ 15,000 ಗೌರವ ಧನ ಮತ್ತು 10,000 ಬೋನಸ್ ಸೇರಿದಂತೆ ಒಟ್ಟು 25,000 ರೂಪಾಯಿ ಘೋಷಿಸಲಾಗಿದೆ. 2591 ಮಕ್ಕಳು 600 ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ ಎಂದು ತಿಳಿಸಿದರು.
ಹೊಸ ಯೋಜನೆಗಳ ಮೂಲಕ ಕಾರ್ಮಿಕರ ಬದುಕಿನಲ್ಲಿ ವಿಶ್ವಾಸ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪೈಲೆಟ್ ತರಬೇತಿ ನೀಡಲಿದ್ದು, ಪ್ರತಿ ಅಭ್ಯರ್ಥಿರಿಗೆ 37 ಲಕ್ಷ ರೂಪಾಯಿ ವೆಚ್ಚದಲ್ಲಿ ತರಬೇತಿ ನೀಡಲಾಗುವುದು. ತಿಂಗಳಿಗೆ 6000 ರೂ.ಶಿಷ್ಯವೇತನ ನೀಡಲಿದ್ದು, ಬೆಂಗಳೂರು ಮತ್ತು ಧಾರವಾಡದಲ್ಲಿ ತರಬೇತಿಗೆ ಸ್ಥಳ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.