ಬೆಂಗಳೂರು: ಖಾಸಗಿ ವಲಯದ ಕಾರ್ಮಿಕರ ಕನಿಷ್ಠ ವೇತನವನ್ನು 32 ಸಾವಿರ ರೂಪಾಯಿಗೆ ನಿಗದಿ ಮಾಡಬೇಕೆಂದು ಕಾರ್ಮಿಕ ವಲಯದಿಂದ ತೀವ್ರ ಒತ್ತಾಯ ಕೇಳಿಬಂದಿದೆ. ಇದನ್ನು ಉದ್ಯಮ ಸಂಸ್ಥೆಗಳು ಒಪ್ಪದ ಕಾರಣ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.
ಹಣದುಬ್ಬರ ಶೇಕಡ 7.8 ರಷ್ಟು ಇದ್ದು, ಬೆಲೆಗಳು ಹೆಚ್ಚಾಗಿ ಜೀವನ ದುಸ್ತರವಾಗಿದೆ. ಮೂರು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡಬೇಕು, ಕಾಲಕಾಲಕ್ಕೆ ಡಿಎ ನೀಡಬೇಕು ಎಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ. ಕಚ್ಚಾ ಪದಾರ್ಥಗಳ ಬೆಲೆ ಹೆಚ್ಚಾಗಿದ್ದು, ಉದ್ದಿಮೆಗಳನ್ನು ನಡೆಸುವುದು ಕಷ್ಟವಾಗಿದೆ. ವಿದ್ಯುತ್ ದರ ಕೂಡ ಏರಿಕೆಯಾಗಿದ್ದು ಕೊರೋನಾ ಸಂಕಷ್ಟದ ಕಾಲದಲ್ಲಿಯೂ ವೇತನ ನೀಡಲಾಗಿದೆ ಎಂದು ಉದ್ಯಮ ಸಂಸ್ಥೆಗಳು ಹೇಳಿವೆ.
ಕನಿಷ್ಠ ವೇತನ 12 ರಿಂದ 16 ಸಾವಿರ ರೂ. ವರೆಗೆ ಇದ್ದು, ಇದನ್ನು 32 ಸಾವಿರ ರೂ.ಗೆ ಏರಿಕೆ ಮಾಡಬೇಕೆಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ. ಉದ್ಯಮ ಸಂಸ್ಥೆಗಳು 22 ರಿಂದ 24 ಸಾವಿರ ರೂ. ನೀಡುವ ಬಗ್ಗೆ ಚಿಂತನೆ ನಡೆಸಿವೆ. ರಾಜ್ಯ ಸರ್ಕಾರದ ಕನಿಷ್ಠ ವೇತನ ಪರಿಷ್ಕರಣೆ ಸಲಹಾ ಸಮಿತಿ ಸಭೆ ಇತ್ತೀಚೆಗೆ ನಡೆದಿದ್ದು ಸಭೆಯಲ್ಲಿ ಕಾರ್ಮಿಕ ಸಂಘಟನೆಗಳು ಮತ್ತು ಉದ್ಯಮ ಸಂಸ್ಥೆಗಳು ತಮ್ಮ ತಮ್ಮ ಬೇಡಿಕೆ, ಅಭಿಪ್ರಾಯ ತಿಳಿಸಿವೆ.
ಈ ನಿಟ್ಟಿನಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದ್ದು, ಕಾರ್ಮಿಕರು ಮತ್ತು ಉದ್ದಿಮೆದಾರರ ಹಿತ ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಿದೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.