ಕಾರವಾರ: ತಾಕತ್ತಿದ್ದರೆ ನಮ್ಮನ್ನು ಉಚ್ಚಾಟಿಸಲಿ ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸವಾಲು ಹಾಕಿದ್ದಾರೆ.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮತ್ತು ಎಸ್.ಟಿ. ಸೋಮಶೇಖರ್ ಬಿಜೆಪಿ ಅಥವಾ ಕಾಂಗ್ರೆಸ್ ಅಲ್ಲ, ನಮ್ಮದು ಕರ್ನಾಟಕ ಶಾಸಕಾಂಗ ಪಕ್ಷವಾಗಿದೆ. ನಮ್ಮ ರಾಜೀನಾಮೆಯ ಫಲವಾಗಿಯೇ ಅಧಿಕಾರ ಅನುಭವಿಸಿದ ಬಿಜೆಪಿಯವರಿಗೆ ಈಗ ರಾಜೀನಾಮೆ ಕೇಳುವ ನೈತಿಕ ಹಕ್ಕು ಇಲ್ಲ. ತಾಕತ್ತಿದ್ದರೆ ಉಚ್ಚಾಟಿಸಲಿ ಎಂದು ಸವಾಲು ಹಾಕಿದ್ದಾರೆ.
ಶಾಸನ ಸಭೆಯಲ್ಲಿ ಬಿಜೆಪಿಯವರಿಗೆ ನಮ್ಮೊಂದಿಗೆ ಗುರುತಿಸಿಕೊಳ್ಳಲು ಮುಜುಗರವಾದರೆ ಅದು ಅವರಿಗೆ ಬಿಟ್ಟ ಸಂಗತಿಯಾಗಿದೆ. ಅವರು ನನ್ನನ್ನು ಯಾವುದೇ ಪ್ರತಿಭಟನೆಗೆ ಕರೆದಿಲ್ಲ. ಈ ಹಿಂದೆ ನಾನು ರಾಜೀನಾಮೆ ನೀಡಿಯೇ ಚುನಾವಣೆ ಎದುರಿಸಿದ್ದೇನೆ. ರಾಜೀನಾಮೆ ಬಗ್ಗೆ ಉಪದೇಶ ಕೊಡಬೇಕಿಲ್ಲ. ಈ ಹಿಂದೆ ರಾಜೀನಾಮೆ ಕೊಟ್ಟು ಬಂದಾಗ ಕಾಂಗ್ರೆಸ್ ಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿಯವರಿಗೆ ಅನಿಸಲಿಲ್ಲವೇ? ಬಿಜೆಪಿಗೆ ಈಗೇಕೆ ನಾನು ಅನ್ಯಾಯ ಮಾಡುತ್ತಿದ್ದೇನೆ ಅನ್ನಿಸುತ್ತಿದೆ ಎಂದು ಶಿವರಾಮ ಹೆಬ್ಬಾರ್ ಪ್ರಶ್ನಿಸಿದ್ದಾರೆ.