
ಕೊಪ್ಪಳ: ಕೆಪಿಪಿ ಶಾಸಕ ಜನಾರ್ಧನ ರೆಡ್ಡಿ ಹಾಗೂ ಸಚಿವ ಶಿವರಾಜ್ ತಂಗಡಗಿ ನಡುವಿನ ವಾಗ್ಯುದ್ಧ ತಾರಕಕ್ಕೇರಿದೆ. ಜನಾರ್ಧನ ರೆಡ್ಡಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿರುವ ಸಚಿವ ತಂಗಡಗಿ, ಪಕ್ಷೇತರನಾಗಿ ಗೆದ್ದ ಕೂಡಲೇ ನಿನ್ನ ಕಾವಲುಗಾರರು ನನ್ನ ಮನೆ ಮುಂದೆ ನಿಂತು ಕಾಯುತ್ತಿದ್ದದ್ದು ಮರೆತು ಹೋಯಿತಾ? ಎಂದು ಪ್ರಶ್ನಿಸಿದ್ದಾರೆ.
ಕೊಪ್ಪಳದ ಕಾರಟಗಿಯಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಟಗರು ಬೆಂಗಳೂರಿನಿಂದ ಬಳ್ಳಾರಿಗೆ ಬಂದು ಗುದ್ದಿದ್ದು ನೆನಪಿದೆಯಾ? ರಾಜ್ಯಸಭಾ ಚುನಾವಣೆಗೂ ಮುನ್ನ ನನ್ನ ಮನೆ ಸುತ್ತ ಓಡಾಡಿದ್ದನ್ನು ಬಹಿರಂಗಪಡಿಸಬೇಕಾ? ನನ್ನನ್ನು ಸೇರಿದಂತೆ ಐವರು ಶಾಸಕರ ಬೆಂಬಲದಿಂದ ನೀನು, ನಿನ್ನ ಸರ್ಕಾರ ಅಂದು ಅಧಿಕಾರಕ್ಕೆ ಬಂದಿತ್ತು. ಸಂಸ್ಕಾರವುಳ್ಳ ಕುಟುಂಬದಿಂದ ಬಂದಿದ್ದಕ್ಕೆ ನಿನ್ನನ್ನು ಸುಮ್ಮನೆ ಬಿಟ್ಟಿದ್ದೇನೆ ಎಂದು ಕಿಡಿಕಾರಿದ್ದಾರೆ.
ನಿನ್ನ ಹಣೆಬರಹ ನನಗೆ ಚೆನ್ನಾಗಿ ಗೊತ್ತು. ನಿನ್ನಿಂದ ಶಿವರಾಜ್ ತಂಗಡಿಗಿ ಮಂತ್ರಿಯಾಗಿಲ್ಲ. ಕನಕಗಿರಿ ಕ್ಷೇತ್ರದ ಜನರ ಆಶಿರ್ವಾದದಿಂದ ಮಂತ್ರಿಯಾಗಿದ್ದೆ ಎಂದು ಗುಡುಗಿದ್ದಾರೆ.