ಬೆಂಗಳೂರು: ಜಾತಿ ಗಣತಿ ಕುರಿತು ಸಿದ್ಧಪಡಿಸಿರುವ ಕಾಂತರಾಜು ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಲಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಬೆಂಗಳೂರಿನ ಪುಟ್ಟಣ್ಣ ಚೆಟ್ಟಿ ಭವನದಲ್ಲಿ ದೇವಾಂಗ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ನೆರವು ನೀಡುವ ಉದ್ದೇಶದಿಂದ ಕಾಂತರಾಜು ನೇತೃತ್ವದಲ್ಲಿ ಜಾತಿ ಗಣತಿ ವರದಿ ಸಿದ್ಧಪಡಿಸಲು ಆದೇಶ ನೀಡಿ, 168 ಕೋಟಿ ರೂ. ನೀಡಲಾಗಿತ್ತು. ಇದೀಗ ಕಾಂತರಾಜು ಆಯೋಗದ ವರದಿ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
ವರದಿ ಸಲ್ಲಿಕೆ ಸಂದರ್ಭದಲ್ಲಿ ಕೆಲವು ಸಮುದಾಯಗಳು ವರದಿಯಿಂದ ಸಮಸ್ಯೆಯಾಗುತ್ತದೆ ಎಂದು ಮಾತನಾಡುತ್ತಿದ್ದಾರೆ. ವರದಿ ಸ್ವೀಕಾರಕ್ಕೆ ಮೊದಲೇ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಸರ್ಕಾರ ಇನ್ನೂ ವರದಿ ಪಡೆದುಕೊಂಡಿಲ್ಲ. ಅದರಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.